ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಾಂದ್ರಾ ಪೂರ್ವದ ಖಾಸಗಿ ಮನೆಯ ಬಳಿ ಬಿಜೆಪಿ ಕಾರ್ಯಕರ್ತ ಮೋಹಿತ್ ಕಾಂಬೋಜ್-ಭಾರತೀಯ ಅವರ ವಾಹನದ ಮೇಲೆ ಆಕ್ರೋಶಗೊಂಡ ಗುಂಪೊಂದು ದಾಳಿ ಮಾಡಿದೆ.
ಈ ದಾಳಿಯ ಹಿಂದೆ ಶಿವಸೇನೆ ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿ, ಶುಕ್ರವಾರ ರಾತ್ರಿ ನಡೆದ ಘಟನೆ ಕುರಿತು ಮಹಾ ವಿಕಾಸ್ ಅಘಾಡಿ ಸರ್ಕಾರವು ತನಿಖೆ ನಡೆಸಬೇಕೆಂದು ಶನಿವಾರ ಆಗ್ರಹಿಸಿದೆ.
ಕಾಂಬೋಜ್ ಅವರ ಕಾರು ಕಲಾನಗರ ಜಂಕ್ಷನ್ ಬಳಿ ನಿಂತಾಗ, ಸುಮಾರು 200 ಜನರ ಗುಂಪೊಂದು ಹಠಾತ್ತನೆ ಸುತ್ತುವರೆದು ಅವರ ಕಾರಿನ ಮೇಲೆ ದಾಳಿ ನಡೆಸಿತು ಎಂದು ಹೇಳಿದ್ದಾರೆ.
'ಮದುವೆಯಿಂದ ಹಿಂತಿರುಗುತ್ತಿದ್ದಾಗ ನನಗೆ ತಡೆಯೊಡ್ಡಿದರು. ಕೆಲವು ಪೋಲೀಸರು ಅಲ್ಲಿಗೆ ಧಾವಿಸಿ ನನ್ನನ್ನು ರಕ್ಷಿಸಿದರು. ನನ್ನನ್ನು ಉಳಿಸಲು ಜನರನ್ನು ನಿಯಂತ್ರಿಸಿದ ಅವರಿಗೆ ಧನ್ಯವಾದಗಳು' ಎಂದು ಕಾಂಬೋಜ್ ಹೇಳಿದರು.
ಕಲಾನಗರ ಜಂಕ್ಷನ್ ಹೆಚ್ಚಿನ ಭದ್ರತಾ ವಲಯದಲ್ಲಿರುವ ಠಾಕ್ರೆ ಅವರ ಮನೆ ಮಾತೋಶ್ರೀಯಿಂದ ಸ್ವಲ್ಪ ದೂರದಲ್ಲಿದೆ.
ನಾನು ಕುಂದುವುದಿಲ್ಲ ಮತ್ತು ಎಂವಿಎ ನಾಯಕರ ಕತ್ಯವನ್ನು ಬಹಿರಂಗಪಡಿಸುವುದನ್ನು ಮುಂದುವರಿಸುತ್ತೇನೆ ಎಂದು ಎಂದು ಪ್ರತಿಜ್ಞೆ ಮಾಡಿದರು.
'ಸಂಸದೆ ನವನೀತ್ ಕೌರ್ ರಾಣಾ ಮತ್ತು ಅವರ ಪತಿ ರವಿ ರಾಣಾ ಅವರು ಮಾತೋಶ್ರೀ'ಯ ಮುಂದೆ ಶನಿವಾರ ಹನುಮಾನ್ ಚಾಲೀಸಾ ಪಠಿಸುವ ಯೋಜನೆಗಳಿಗೆ ಪ್ರತಿಯಾಗಿ, ಠಾಕ್ರೆಯವರ ನಿವಾಸದ ಬಳಿ ಶುಕ್ರವಾರ ಬೆಳಗ್ಗೆಯಿಂದಲೇ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು, ಶಿವಸೇನೆ ಕಾರ್ಯಕರ್ತರು ಕೂಡ ಜಮಾಯಿಸಿದ್ದಾರೆ.
ಮುಂಬೈ ಪೊಲೀಸರು ರಾಣಾ ದಂಪತಿಗೆ ನೋಟಿಸ್ ನೀಡಿದ್ದಾರೆ ಮತ್ತು ಖಾರ್‌ನಲ್ಲಿರುವ ಅವರ ಮನೆಯನ್ನು ಸುತ್ತುವರಿದಿದ್ದಾರೆ.
'(ಎಂವಿಎ) ಸರ್ಕಾರದ ವಿರುದ್ಧ ಮಾತನಾಡುವ ಜನರ ಮೇಲೆ ದಾಳಿ ನಡೆಸುವ ಪ್ರವೃತ್ತಿ ಕಂಡುಬರುತ್ತಿದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರು ದೇವೇಂದ್ರ ಫಡಣವಿಸ್ ಹೇಳಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ ವಿಶ್ವಾಸ್ ನಾಗ್ರೆ-ಪಾಟೀಲ್ ನೇತೃತ್ವದ ಉನ್ನತ ಪೊಲೀಸ್ ಅಧಿಕಾರಿಗಳು ಅಲ್ಲಿ ಮತ್ತು ಮುಂಬೈನ ಇತರ ಭಾಗಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.