ಮುಂಬೈ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಉದ್ರಿಕ್ತ ಜನರ ಗುಂಪು, ಮಸೀದಿ ಮೇಲೆ ಆಕ್ರಮಣ ಮಾಡಿ ಧ್ವಂಸಗೊಳಿಸಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಆಲ್ ಇಂಡಿಯಾ ಮಾಜ್ಲಿಸ್–ಇ–ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಮಸೀದಿಯೊಂದರ ಮೇಲಿನ ದಾಳಿಯ ವಿಡಿಯೊವೊಂದನ್ನು ರಿಟ್ವೀಟ್ ಮಾಡಿರುವ ಓವೈಸಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಸಿಎಂ ಶಿಂದೆ ಹಾಗೂ ಡಿಸಿಎಂ ಫಡಣವೀಸ್ ಸರ್ಕಾರದ ಅಡಿಯಲ್ಲಿ ಡಿಸೆಂಬರ್ 6ರ ಘಟನೆ ಮರುಕಳಿಸುತ್ತಿದೆ. ಮಸೀದಿಯ ಮೇಲೆ ದಾಳಿ ನಡೆದಿದೆ. ಇದು ಕಾನೂನಿನ ಮೇಲಿನ ದಾಳಿಯಾಗಿದ್ದು, ಸರ್ಕಾರವು ಕಾಳಜಿ ವಹಿಸುತ್ತಿಲ್ಲ' ಎಂದು ಅವರು ದೂರಿದ್ದಾರೆ.
'ಇಂತಹ ದಾಳಿಯನ್ನು ತಡೆಯಲು ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎಂಐಎಂ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮುಸ್ಲಿಮರು ತಕ್ಕ ಉತ್ತರ ನೀಡಬೇಕು' ಎಂದು ಓವೈಸಿ ಕರೆ ನೀಡಿದ್ದಾರೆ.
'ಇಂತವರಿಗೆ ಬೆಂಬಲ ನೀಡುವ ರಾಜಕೀಯ ಪಕ್ಷಗಳು ಹಾಗೂ ನಾಯಕರ ಮೌನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.