ಗುವಾಹಟಿ: ಸರ್ಕಾರಿ ನೇಮಕಾತಿ ಪರೀಕ್ಷೆ ನಡೆಯಲಿರುವ ಕಾರಣ ಅಸ್ಸಾಂನಾದ್ಯಂತ ಭಾನುವಾರ ಬೆಳಿಗ್ಗೆ 8.30ರಿಂದ ಸಂಜೆ 4ಗಂಟೆಯವರೆಗೆ ಮೊಬೈಲ್ ಇಂಟರ್‌ನೆಟ್ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಪಾರದರ್ಶಕ ಮತ್ತು ನ್ಯಾಯಯುತವಾಗಿ ಲಿಖಿತ ಪರೀಕ್ಷೆ ನಡೆಸಲು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಸಾರ್ವಜನಿಕ ಸುರಕ್ಷತೆಗೆ ತೊಡಕಾಗದಂತೆ ತಡೆಯಲು ಮೊಬೈಲ್ ಇಂಟರ್‌ನೆಟ್, ಮೊಬೈಲ್ ವೈಫೈ ಸೇರಿದಂತೆ ಮೊಬೈಲ್ ಡಾಟಾ ಸೇವೆಗಳನ್ನು ಒದಗಿಸುವವರು ಸ್ಥಗಿತಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಪ್ಟೆಂಬರ್‌ನಲ್ಲಿ ಇದೇ ರೀತಿಯ ಪರೀಕ್ಷೆ ನಡೆಸುವ ವೇಳೆ ಎರಡು ದಿನಗಳ ಕಾಲ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಭಾನುವಾರ ಅಸ್ಸಾಂ ರಾಜ್ಯ ಶಾಲ ಶಿಕ್ಷಣ ಇಲಾಖೆಯು ಗ್ರೇಡ್ 4ರ ಹುದ್ದೆಗಾಗಿ 28 ಜಿಲ್ಲೆಗಳಲ್ಲಿ ಎರಡು ಪಾಳಿಯಲ್ಲಿ ಪರೀಕ್ಷೆ ನಡೆಸುತ್ತಿದೆ. 8,27,130 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಬೆಳಿಗ್ಗೆ 9 ರಿಂದ 11.30ರವರೆಗೆ ಹಾಗೂ ಮಧ್ಯಾಹ್ನ 1.30ರಿಂದ 4ರವರೆಗೆ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಮೊಬೈಲ್ ಆ್ಯಪ್‌ಗಳ ಮೂಲಕ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯಲು ಮತ್ತು ಸಾರ್ವಜನಿಕರಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಲು ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.