ಗುರುಗ್ರಾಮ: ಎರಡು ವಾರಗಳ ಹಿಂದೆ ಕೋಮುಗಲಭೆ ನಡೆದಿದ್ದ ಹರಿಯಾಣ ರಾಜ್ಯದ ನೂಹ್ ಇದೀಗ ಸಹಜ ಸ್ಥಿತಿಗೆ ಮರಳಿದ್ದು, ಸೋಮವಾರದಿಂದ ಮೊಬೈಲ್ ಇಂಟರ್‌ನೆಟ್ ಸೇವೆಯನ್ನೂ ಪುನರಾರಂಭಿಸಲಾಗಿದೆ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಜುಲೈ 31ರಂದು ನೂಹ್‌ನಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗುಂಪೊಂದು ದಾಳಿ ನಡೆಸಿದ್ದರಿಂದ ಕೋಮು ಸಂಘರ್ಷ ಉಂಟಾಗಿತ್ತು. ಅದು ಗುರುಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಕ್ಕೂ ವ್ಯಾಪಿಸಿತ್ತು. ಈ ಗಲಭೆಯಲ್ಲಿ ಗೃಹ ರಕ್ಷಕ ಪಡೆಯ ಇಬ್ಬರು, ಒಬ್ಬ ಮುಸ್ಲಿಂ ಧರ್ಮಗುರು ಸೇರಿದಂತೆ ಒಟ್ಟು ಆರು ಮಂದಿ ಹತ್ಯೆಯಾಗಿದ್ದರು.
ಗಲಭೆಯನ್ನು ತಡೆಯುವ ಉದ್ದೇಶದಿಂದ ಸರ್ಕಾರ ಜುಲೈ 31ರಿಂದ ಆಗಸ್ಟ್ 8ರವರೆಗೆ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು. ಬಳಿಕ ಅದನ್ನು ಆಗಸ್ಟ್ 13ರವರೆಗೂ ವಿಸ್ತರಿಸಲಾಗಿತ್ತು.
ಸದ್ಯ ನೂಹ್ ಸಹಜ ಸ್ಥಿತಿಗೆ ಮರಳಿದ್ದು, ಮಾರುಕಟ್ಟೆಗಳು ತೆರೆದಿವೆ. ಜನರು ಮಾರುಕಟ್ಟೆಗಳಿಗೆ ತೆರಳಿ ತಮಗೆ ಬೇಕಾದ ಪದಾರ್ಥಗಳನ್ನು ಖರೀದಿಸುವಲ್ಲಿ ತೊಡಗಿದ್ದಾರೆ. ಗಲಭೆ ನಡೆದ 10 ದಿನಗಳ ಬಳಿಕ ಶಾಲೆಗಳೂ ಕಾರ್ಯಾರಂಭ ಮಾಡಿದ್ದು, ಮಕ್ಕಳು ಶಾಲೆಗಳಿಗೆ ತೆರಳುತ್ತಿದ್ದಾರೆ.
‘ರಾಜ್ಯದ ಸಾರಿಗೆ ಇಲಾಖೆಯ ಬಸ್‌ಗಳ ಸಂಚಾರದ ಸೇವೆಯೂ ಪುನರಾರಂಭವಾಗಿದ್ದು, ಜನರು ತಮಗೆ ಬೇಕಾದ ಸ್ಥಳಗಳಿಗೆ ಹೋಗಿ ಬರಲು ಸಾಧ್ಯವಾಗುತ್ತಿದ್ದು, ಪರಿಸ್ಥಿತಿ ಬಹುತೇಕ ಸಹಜ ಸ್ಥಿತಿಗೆ ಬಂದಿದೆ’ ಎಂದು ಜಿಲ್ಲಾಧಿಕಾರಿ ಧೀರೇಂದ್ರ ಖಡ್ಗತ ಪ್ರತಿಕ್ರಿಯಿಸಿದರು.
ನೂಹ್‌ನಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪೊಲೀಸರ ಪಥ ಸಂಚಲನ ಘಟಕವು ಪೂರ್ವ ಸಿದ್ಧತೆ ನಡೆಸಿದೆ ಎಂದು ಅವರು ಹೇಳಿದರು.
ಮಹಾಪಂಚಾಯತ್ ನಿರ್ಧಾರ: ನೂಹ್‌ನ ಪಕ್ಕದ ಪಲ್ವಾಲ್ ಜಿಲ್ಲೆಯ ಪೊಂಡ್ರಿ ಗ್ರಾಮದಲ್ಲಿ ಭಾನುವಾರ ಹಿಂದೂ ಸಂಘಟನೆಗಳು ‘ಮಹಾಪಂಚಾಯತ್’ ನಡೆಸಿವೆ. ನೂಹ್‌ನಲ್ಲಿ ಜುಲೈ 31ರಂದು ಕೋಮುಗಲಭೆಯಿಂದಾಗಿ ಅಡ್ಡಿಯಾಗಿದ್ದ ವಿಎಚ್‌ಪಿಯ ‘ಬ್ರಜ್ ಮಂಡಲ್ ಯಾತ್ರೆ’ಯನ್ನು ಆಗಸ್ಟ್ 28ರಂದು ನಡೆಸಲು ನಿರ್ಧರಿಸಿವೆ.
‘ನೂಹ್‌ನಲ್ಲಿ ಜುಲೈ 31ರ ವಿಎಚ್‌ಪಿ ಯಾತ್ರೆ ಮೇಲೆ ನಡೆದ ದಾಳಿಯ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಮತ್ತು ನೂಹ್ ಅನ್ನು ಗೋಹತ್ಯೆ ಮುಕ್ತ ಜಿಲ್ಲೆಯೆಂದು ಘೋಷಿಸಬೇಕು’ ಎಂದು ಮಹಾಪಂಚಾಯತ್ ಬೇಡಿಕೆಯಿಟ್ಟಿದೆ. ಇದರ ಬೆನ್ನಲ್ಲೇ ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.