ADVERTISEMENT

ಪಟಿಯಾಲ ಉದ್ವಿಗ್ನ: ಮೂವರು ಪೊಲೀಸ್‌ ಅಧಿಕಾರಿಗಳು ವರ್ಗ, ಮೊಬೈಲ್‌ ಸೇವೆ ಬಂದ್‌

ಪಿಟಿಐ
Published 30 ಏಪ್ರಿಲ್ 2022, 5:41 IST
Last Updated 30 ಏಪ್ರಿಲ್ 2022, 5:41 IST
ಪಟಿಯಾಲ ಘರ್ಷಣೆಯ ಸನ್ನಿವೇಶ (ಪಿಟಿಐ)
ಪಟಿಯಾಲ ಘರ್ಷಣೆಯ ಸನ್ನಿವೇಶ (ಪಿಟಿಐ)   

ಚಂಡೀಗಡ: ಖಾಲಿಸ್ತಾನ ವಿರೋಧಿ ಮೆರವಣಿಗೆಗೆ ಸಂಬಂಧಿಸಿದಂತೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಪಂಜಾಬ್‌ನ ಪಟಿಯಾಲ ಉದ್ವಿಗ್ನಗೊಂಡಿದ್ದು, ಶನಿವಾರ ಮೂವರು ಪೊಲೀಸ್‌ ಅಧಿಕಾರಿಗಳನ್ನು ದಿಢೀರ್‌ ವರ್ಗಾವಣೆ ಮಾಡಲಾಗಿದೆ. ಜತೆಗೆ, ಮೊಬೈಲ್‌ ಸಂಪರ್ಕ ಸೇವೆಯನ್ನು ಶನಿವಾರ ಕಡಿತಗೊಳಿಸಲಾಗಿದೆ.

ಪಟಿಯಾಲ ವಲಯ ಐಜಿಪಿ ಸೇರಿದಂತೆ ಮೂವರು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಮುಖ್ಯಮಂತ್ರಿ ಭಗವಂತ ಮಾನ್‌ ಅವರ ಕಚೇರಿಯಿಂದ ಆದೇಶ ಹೊರಬಿದ್ದಿದೆ.

ಮುಖವಿಂದರ್ ಸಿಂಗ್ ಚಿನ್ನಾ ಅವರನ್ನು ಪಟಿಯಾಲ ವಲಯದ ಹೊಸ ಐಜಿ ಆಗಿ ನೇಮಿಸಲಾಗಿದೆ. ದೀಪಕ್ ಪಾರಿಕ್ ಅವರು ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಲಿದ್ದಾರೆ. ವಜೀರ್ ಸಿಂಗ್ ಅವರನ್ನು ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.

ADVERTISEMENT

ಖಾಲಿಸ್ತಾನ ವಿರೋಧಿ ಮೆರವಣಿಗೆಗೆ ಸಂಬಂಧಿಸಿದಂತೆ ಪಟಿಯಾಲದಲ್ಲಿ ಶುಕ್ರವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದವು. ಈ ವೇಳೆ ನಾಲ್ವರು ಗಾಯಗೊಂಡಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು.

ಗೃಹ ಇಲಾಖೆಯ ಆದೇಶದ ಮೇರೆಗೆ ಪಟಿಯಾಲದಲ್ಲಿ ಪೊಲೀಸರನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.

ಇನ್ನು, ಇಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆ ವರೆಗೆ ಮೊಬೈಲ್‌ ಸಂಪರ್ಕ ಕಡಿತ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಮೊಬೈಲ್‌ ಕರೆ ಹೊರತುಪಡಿಸಿದರೆ, ಇನ್ನಿತರೆ ಯಾವುದೇ ಸಂಪರ್ಕ ಸೇವೆಗಳೂ ಲಭ್ಯವಿರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.