ನವದೆಹಲಿ: ಬಳಕೆ ಮಾಡದೆ ಇದ್ದ ಕಾರಣಕ್ಕೆ ನಿಷ್ಕ್ರಿಯಗೊಂಡ ಹಾಗೂ ಬಳಕೆದಾರರ ಕೋರಿಕೆಯ ಮೇರೆಗೆ ಸಂಪರ್ಕ ಕಡಿತ ಮಾಡಲಾದ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಕನಿಷ್ಠ 90 ದಿನಗಳವರೆಗೆ ಹೊಸ ಚಂದಾದಾರರಿಗೆ ನೀಡುವುದಿಲ್ಲ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಬಳಕೆ ಮಾಡದೆ ಇದ್ದ ಕಾರಣಕ್ಕೆ ಮೊಬೈಲ್ ದೂರವಾಣಿ ಸಂಖ್ಯೆಗಳ ಸಂಪರ್ಕ ಕಡಿತ ಮಾಡಿದ ನಂತರ ಅಥವಾ ಸಂಪರ್ಕ ನಿಷ್ಕ್ರಿಯಗೊಳಿಸಿದ ನಂತರ ದತ್ತಾಂಶವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಆತಂಕ ಹೆಚ್ಚುತ್ತಿರುವ ಕುರಿತ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ನ್ಯಾಯಪೀಠ ನಡೆಸಿತ್ತು.
ನಿರ್ದಿಷ್ಟ ದೂರವಾಣಿ ಸಂಖ್ಯೆಗೆ ಜೋಡಣೆ ಆಗಿರುವ ವಾಟ್ಸ್‌ಆ್ಯಪ್ ಖಾತೆಯನ್ನು ಬಳಕೆದಾರರು ಅಳಿಸಿಹಾಕಿ, ಫೋನ್‌ನಲ್ಲಿ ಅಥವಾ ಕ್ಲೌಡ್‌ನಲ್ಲಿ ದಾಖಲಾಗಿರುವ ದತ್ತಾಂಶವನ್ನು ಅಳಿಸಿಹಾಕಿ ಅವುಗಳ ದುರ್ಬಳಕೆಯನ್ನು ತಪ್ಪಿಸಬಹುದು ಎಂಬುದನ್ನು ಕೋರ್ಟ್ ಗುರುತಿಸಿತು.
‘ಈ ಅರ್ಜಿಯ ವಿಚಾರಣೆಯನ್ನು ಇನ್ನಷ್ಟು ಮುಂದಕ್ಕೆ ಒಯ್ಯುವ ಇರಾದೆ ನಮಗಿಲ್ಲ... ಖಾಸಗಿತನವನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕೆಲಸ ಮಾಡಬೇಕಿರುವುದು ಮೊಬೈಲ್ ದೂರವಾಣಿ ಸಂಖ್ಯೆಯನ್ನು ಹಿಂದೆ ಬಳಸುತ್ತಿದ್ದವರು’ ಎಂದು ಪೀಠವು ಅಕ್ಟೋಬರ್ 30ರಂದು ನೀಡಿದ ಆದೇಶದಲ್ಲಿ ಹೇಳಿದೆ.
‘ಮರುಬಳಕೆಯ ಫೋನ್ ನಂಬರ್ ವಿಚಾರವಾಗಿ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳಲು, ಖಾತೆಯಲ್ಲಿ ಚಟುವಟಿಕೆ ಇಲ್ಲದಿರುವುದನ್ನು ಗಮನಿಸಲಾಗುತ್ತದೆ. 45 ದಿನಗಳವರೆಗೆ ಖಾತೆಯಲ್ಲಿ ಚಟುವಟಿಕೆ ಇಲ್ಲ ಎಂದಾದರೆ, ನಂತರ ಇನ್ನೊಂದು ಮೊಬೈಲ್ ಫೋನ್‌ನಲ್ಲಿ ಖಾತೆ ಸಕ್ರಿಯವಾಯಿತು ಎಂದಾದರೆ ಹಳೆಯ ಖಾತೆಯ ದತ್ತಾಂಶವನ್ನು ತೆಗೆದುಹಾಕಲಾಗುತ್ತದೆ’ ಎಂದು ವಾಟ್ಸ್‌ಆ್ಯಪ್ ಸಹಾಯವಾಣಿ ಕೇಂದ್ರದಲ್ಲಿ ಇರುವ ಮಾಹಿತಿಯನ್ನು ಕೋರ್ಟ್ ದಾಖಲಿಸಿಕೊಂಡಿದೆ.
ಟ್ರಾಯ್ ಸಲ್ಲಿಸಿದ ಪ್ರಮಾಣಪತ್ರದಲ್ಲಿನ ಅಂಶವನ್ನು ದಾಖಲು ಮಾಡಿಕೊಂಡ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.