ನವದೆಹಲಿ: ‘ತನ್ನ ಮೂಲ ಕಾರ್ಯಸೂಚಿಯನ್ನು ಜಾರಿ ಮಾಡಲು ಬಿಜೆಪಿ ಸಿದ್ಧವಾಗಿದೆ’ ಎಂಬ ಸೂಚನೆಯನ್ನು 370ನೇ ವಿಧಿಯನ್ನು ಅಸಿಂಧುಗೊಳಿಸುವ ಮೂಲಕ ಕೇಂದ್ರ ಸರ್ಕಾರ ನೀಡಿದೆ.
‘ಏಕ್ ದೇಶ್‌ಮೆ ದೋ ವಿಧಾನ್, ದೋ ಪ್ರಧಾನ್ ಔರ್ ದೋ ನಿಶಾನ್ ನಹೀಂ ಚಲೇಂಗೆ’ (ಒಂದು ರಾಷ್ಟ್ರದಲ್ಲಿ ಎರಡು ಕಾನೂನು, ಇಬ್ಬರು ಮುಖ್ಯಸ್ಥರು ಹಾಗೂ ಎರಡು ಧ್ವಜಗಳು ನಡೆಯುವುದಿಲ್ಲ) ಎಂಬುದು ಆರ್‌ಎಸ್‌ಎಸ್ ಮುಖಂಡರಾಗಿದ್ದ ದೀನದಯಾಳ್ ಉಪಾಧ್ಯಾಯ ಅವರ ಘೋಷಣೆಯಾಗಿತ್ತು. ಅ ಘೋಷಣೆಯ ಮೂಲಕವೇ ಬಿಜೆಪಿ ಜನ್ಮತಳೆದಿತ್ತು.
370ನೇ ವಿಧಿಯ ರದ್ದತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಏಕರೂಪದ ನಾಗರಿಕ ಸಂಹಿತೆ ಜಾರಿಮಾಡುವ ವಿಚಾರವು ಪ್ರತಿ ಚುನಾವಣೆಯ ಸಂದರ್ಭದಲ್ಲೂ ಬಿಜೆಪಿಯ ಪ್ರಣಾಳಿಕೆಯಲ್ಲಿ ಸ್ಥಾನ ಪಡೆಯುತ್ತಿತ್ತು. ಆದರೆ ಬಿಜೆಪಿ ನೇತೃತ್ವದ ಮೊದಲ ಸರ್ಕಾರದಲ್ಲಿ ಇವುಗಳಲ್ಲಿ ಯಾವ ಘೋಷಣೆಯೂ ಈಡೇರಲಿಲ್ಲ. ಕಳೆದ ಸರ್ಕಾರದ ಕೊನೆಯ ಎರಡು ವರ್ಷಗಳಲ್ಲಿ ಮೂಲ ಕಾರ್ಯಸೂಚಿಗೆ ಮರಳುವಂತೆ ಬಿಜೆಪಿಯ ಮೇಲೆ ಅದರ ಸಿದ್ಧಾಂತ ನಿರೂಪಿಸುವ ಸಂಸ್ಥೆಯಾದ ಆರ್‌ಎಸ್‌ಎಸ್ ಒತ್ತಡ ಹೇರುತ್ತಲೇ ಇತ್ತು. ರಾಮ ಮಂದಿರ ನಿರ್ಮಾಣ
ವನ್ನು ಶೀಘ್ರ ಆರಂಭಿಸುವಂತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.
ಆರ್‌ಎಸ್‌ಎಸ್‌ನ ಬಿ.ಎಲ್. ಸಂತೋಷ್ ಅವರನ್ನು ಇತ್ತೀಚೆಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ನಂತರ 370ನೇ ವಿಧಿ ರದ್ದತಿಯ ವಿಚಾರ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ಮೂಲ ಸಿದ್ಧಾಂತ ಹಾಗೂ ಕಾರ್ಯಸೂಚಿಗೆ ಬದ್ಧರಾಗಿ ಕೆಲಸ ಮಾಡುವ ಸಂತೋಷ್ ಅವರು, ಬಿಜೆಪಿ– ಆರ್‌ಎಸ್‌ಎಸ್ ನಡುವೆ ಕೊಂಡಿಯಾಗಿ ಕೆಲಸ ಮಾಡಿದ್ದಾರೆ.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಬಿಜೆಪಿ ಪ್ರಣಾಳಿಕೆಯಲ್ಲಿ, ‘ಬಿಜೆಪಿ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಶಾಂತಿ– ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ’ ಎಂದು ಹೇಳಲಾಗಿತ್ತಲ್ಲದೆ, ‘370 ಹಾಗೂ 35ಎ ವಿಧಿ ಜಮ್ಮು ಕಾಶ್ಮೀರದ ಹೊರಗಿನ ನಿವಾಸಿಗಳು ಮತ್ತು ಮಹಿಳೆಯರ ವಿರುದ್ಧ ತಾರತಮ್ಯ ಮಾಡುತ್ತಿರುವುದರಿಂದ ಅದನ್ನು ರದ್ದು ಮಾಡುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. 35ಎ ವಿಧಿಯು ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ತಡೆಯಾಗಿದೆ ಎಂಬುದು ನಮ್ಮ ಅನಿಸಿಕೆಯಾಗಿದೆ’ ಎಂದೂ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು.
ರಾಜ್ಯಸಭೆಯಲ್ಲಿ ಸಂಖ್ಯೆಯ ಕೊರತೆ ಇದ್ದರೂ ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಇದರ ಬೆನ್ನಿಗೇ 370ನೇ ವಿಧಿ ಅಸಿಂಧು ವಿಚಾರವೂ ಬಂದಿದೆ. ಈಗ ‘ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ದಿನಗಳೂ ತುಂಬಾ ದೂರ ಇಲ್ಲ’ ಎಂಬ ಅಭಿಪ್ರಾಯವನ್ನೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಮಧ್ಯಸ್ಥಿಕೆಯ ಪ್ರಯತ್ನ ವಿಫಲಗೊಂಡು, ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ದಿನಾಂಕ ನಿಗದಿ ಮಾಡಿದ್ದರಿಂದ ಶೀಘ್ರದಲ್ಲೇ ತೀರ್ಪು ಬರಬಹುದೆಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ಅಸ್ತ್ಯಸ್ತಗೊಂಡಿದೆ. ಸದಸ್ಯರ ರಾಜೀನಾಮೆ ಸರಣಿ ಮುಂದುವರಿದಿರುವುದರಿಂದ ರಾಜ್ಯಸಭೆಯಲ್ಲೂ ವಿರೋಧಪಕ್ಷಗಳ ಶಕ್ತಿ ಕುಂದುತ್ತಿದೆ. ಹೀಗಾಗಿ, ತನ್ನ ಮೂಲ ಕಾರ್ಯಸೂಚಿಯನ್ನು ಜಾರಿಗೊಳಿಸಲು ಇದು ಸಕಾಲ ಎಂಬ ಭಾವನೆ ಬಿಜೆಪಿಯಲ್ಲಿ ಗಟ್ಟಿಯಾಗುತ್ತಿದೆ. ವಿರೋಧಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದ ಕೆಲವು ಸಣ್ಣ ಪಕ್ಷಗಳು ಕಳೆದ 15 ದಿನಗಳಲ್ಲಿ ನಿಲುವನ್ನು ಬದಲಿಸಿ ಮಸೂದೆಗಳ ಅಂಗೀಕಾರಕ್ಕೆ ಬಿಜೆಪಿಗೆ ಸಹಕಾರ ನೀಡುತ್ತಿವೆ.
ಇದನ್ನೂ ಓದಿ:‘ಕಾಶ್ಮೀರಿಗಳು ಬಡವರಾಗೇ ಉಳಿಯಬೇಕೇ?’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.