ನವದೆಹಲಿ:ನರೇಂದ್ರ ಮೋದಿದೇಶದ ಪ್ರಧಾನಮಂತ್ರಿಯಾಗಿ ಇಂದು ಸಂಜೆ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಮಾಣವಚನ ಸಮಾರಂಭ ಎಲ್ಲಿ ನಡೆಯುತ್ತೆ? ಹೇಗಿರಲಿದೆ? ಸಾಕ್ಷಿಯಾಗಲಿರುವಅತಿಥಿಗಳುಯಾರೆಲ್ಲ? ಮಾಹಿತಿ ಇಲ್ಲಿದೆ.
ಸಮಾರಂಭ ಎಲ್ಲಿ?
ರಾಷ್ಟ್ರಪತಿ ಭವನದಲ್ಲಿ ಸಂಜೆ 7 ಗಂಟೆಗೆ ಪ್ರಮಾಣವಚನ ಸ್ವೀಕಾರ ಆರಂಭವಾಗಲಿದ್ದು, ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವುದು ಸಂಪ್ರದಾಯ. ಆದರೆ ಈ ಬಾರಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ (ಹೊರಗೆ) ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗೆ ರಾಷ್ಟ್ರಪತಿ ಭವನದ ಹೊರಗೆ ಪ್ರಮಾಣವಚನ ಸ್ವೀಕಾರ ನಡೆಸಲಾಗುತ್ತಿರುವುದು ಇದು ನಾಲ್ಕನೇ ಬಾರಿ. ಈ ರೀತಿ ಮೊದಲು 1990ರಲ್ಲಿ ಚಂದ್ರಶೇಖರ್ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಂತರ ಅಟಲ್ ಬಿಹಾರಿ ವಾಜಪೇಯಿ ಅವರೂ ಇದೇ ಹಾದಿ ಅನುಸರಿಸಿದ್ದರು.
ಇದನ್ನೂ ಓದಿ:ಹುತಾತ್ಮ, ಮಹಾತ್ಮರಿಗೆ ನರೇಂದ್ರ ಮೋದಿ ನಮನ
ಈ ಬಾರಿಯ ವಿಶೇಷತೆಯೇನು?
* ಸುಮಾರು 8,000 ಅತಿಥಿಗಳು:ಪ್ರಧಾನಿಯ ಪ್ರಮಾಣವಚನ ಸಮಾರಂಭದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅತಿಥಿಗಳು ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.
* ರಾಷ್ಟ್ರಪತಿ ಭವನದ ಹೊರಗೆ ಪ್ರಮಾಣವಚನ ಸ್ವೀಕಾರ
ಅತಿಥಿಗಳು ಯಾರೆಲ್ಲ?
ವಿವಿಧ ದೇಶಗಳ ರಾಯಭಾರಿಗಳು,ರಾಜಕೀಯ ಧುರೀಣರು, ಸಿನಿಮಾ ತಾರೆಯರು, ಕ್ರೀಡಾ ತಾರೆಯರು ಸೇರಿದಂತೆ ಸುಮಾರು 8,000 ಅತಿಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ನೇಪಾಳ ಮತ್ತು ಭೂತಾನ್ ದೇಶಗಳನ್ನೊಳಗೊಂಡ ಬಿಮ್‌ಸ್ಟೆಕ್ ರಾಷ್ಟ್ರಗಳ ಪ್ರತಿನಿಧಿಗಳಿಗೆ (ಬಂಗಾಳ ಕೊಲ್ಲಿಯ ದೇಶಗಳ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಗುಂಪು) ಆಹ್ವಾನ ನೀಡಿರುವುದು ಈ ಬಾರಿಯ ವಿಶೇಷ.
* ಯುಪಿಎ ಅಧ್ಯಕ್ಷೆ ಸೋನಿಯಾ ಗಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಸೇರಿದಂತೆ ಪ್ರತಿಪಕ್ಷಗಳ ನಾಯಕರು.
ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿರುವ ಪ್ರಕಾರ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವ ಬಗ್ಗೆ ದೃಢಪಡಿಸಿದ ವಿದೇಶಿ ಗಣ್ಯರ ಪಟ್ಟಿ ಹೀಗಿದೆ:
* ಮೊಹಮ್ಮದ್ ಅಬ್ದುಲ್ ಹಮೀದ್ – ಬಾಂಗ್ಲಾದೇಶದ ಅಧ್ಯಕ್ಷ
* ಮೈತ್ರಿಪಾಲ ಸಿರಿಸೇನ – ಶ್ರೀಲಂಕಾದ ಅಧ್ಯಕ್ಷ
*ಯು ವಿನ್ ಮೈಂಟ್ – ಮ್ಯಾನ್ಮಾರ್ ಅಧ್ಯಕ್ಷ
* ಪ್ರವಿಂದ್ ಕುಮಾರ್ ಜುಗ್ನಾಥ್ – ಮಾರಿಷಸ್ ಪ್ರಧಾನಿ
* ಕೆ.ಪಿ.ಶರ್ಮಾ ಒಲಿ – ನೇಪಾಳದ ಪ್ರಧಾನಿ
* ಲೋಟೆ ಶೆರಿಂಗ್ – ಭೂತಾನ್ ಪ್ರಧಾನಿ
* ಗ್ರಿಸಾಡಾ ಬನ್ರೆಚ್ – ಥಾಯ್ಲೆಂಡ್‌ನ ವಿಶೇಷ ಪ್ರತಿನಿಧಿ
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ವಿದೇಶ ಪ್ರವಾಸದಲ್ಲಿರುವುದರಿಂದ ಸಮಾರಂಭಕ್ಕೆ ಹಾಜರಾಗುವುದಿಲ್ಲ.
ಹಾಜರಿರಲಿರುವ ಮುಖ್ಯಮಂತ್ರಿಗಳು
* ಎಚ್.ಡಿ.ಕುಮಾರಸ್ವಾಮಿ – ಕರ್ನಾಟಕ
* ಕೆ.ಪಳನಿಸ್ವಾಮಿ – ತಮಿಳುನಾಡು
* ಅರವಿಂದ ಕೇಜ್ರಿವಾಲ್ – ದೆಹಲಿ
* ವೈ.ಎಸ್.ಜಗನ್ ಮೋಹನ್ ರೆಡ್ಡಿ – ಆಂಧ್ರಪ್ರದೇಶದ ನಿಯೋಜಿತ ಸಿಎಂ
* ಕೆ.ಚಂದ್ರಶೇಖರ ರಾವ್ – ತೆಲಂಗಾಣ
ಸಿನಿಮಾ, ಕ್ರೀಡಾ ತಾರೆಯರು, ಉದ್ಯಮಿಗಳಿಗೂ ಆಹ್ವಾನ
ಸಿನಿಮಾ ತಾರೆಯರಾದ ರಜನಿಕಾಂತ್, ಕಮಲಹಾಸನ್, ಶಾರುಖ್ ಖಾನ್, ಸಂಜಯ್ ಬನ್ಸಾಲಿ, ಕರಣ್ ಜೋಹರ್ ಮತ್ತಿತರರಿಗೂ ಆಹ್ವಾನ ನೀಡಲಾಗಿದ್ದು, ಭಾಗವಹಿಸುವ ನಿರೀಕ್ಷೆ ಇದೆ. ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟ, ಬಿಲ್ ಗೇಟ್ಸ್, ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್ ಲಾಗರ್ಡ್ ಅವರಿಗೂ ಆಹ್ವಾನ ನೀಡಲಾಗಿದೆ. ಕ್ರೀಡಾ ತಾರೆಯರಾದ ಪಿ.ಟಿ.ಉಷಾ, ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್ ಕೋಚ್ ಪುಲೆಲ್ಲಾ ಗೋಪಿಚಂದ್ ಇವರನ್ನೂ ಆಹ್ವಾನಿಸಲಾಗಿದೆ. ಆದಾಗ್ಯೂ, ಇರ್‍ಯಾರೂ ತಮ್ಮ ಹಾಜರಾತಿಯನ್ನು ದೃಢಪಡಿಸಿಲ್ಲ.
ಔತಣಕೂಟ
ಸಮಾರಂಭದ ಬಳಿಕ ಬಿಮ್‌ಸ್ಟೆಕ್ ರಾಷ್ಟ್ರಗಳ ಪ್ರತಿನಿಧಿಗಳು ಸೇರಿದಂತೆ 40 ಜನರಿಗೆ ರಾಷ್ಟ್ರಪತಿ ಭವನದಲ್ಲಿ ಔತಣ ಕೂಟ ಏರ್ಪಡಿಸಲಾಗಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.