ADVERTISEMENT

ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಪ್ರಧಾನಿ ಘೋಷಣೆ

ಪ್ರೋತ್ಸಾಹಧನ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2018, 19:30 IST
Last Updated 11 ಸೆಪ್ಟೆಂಬರ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದದಲ್ಲಿ ಸಂತಸದ ಸುದ್ದಿ ಸಿಕ್ಕಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರತಿಂಗಳ ಗೌರವಧನವನ್ನು ಹೆಚ್ಚಿಸಲಾಗುವುದು. ಆಶಾ ಕಾರ್ಯಕರ್ತೆಯರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿಯಲ್ಲಿ ನೀಡುವ ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಆಶಾ ಕಾರ್ಯಕರ್ತೆಯರು ಮತ್ತು ಎಎನ್‌ಎಂಗಳ ಜತೆಗೆ ನಡೆಸಿದ ಸಂವಾದದಲ್ಲಿ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ. ಕಾರ್ಯಕರ್ತೆಯರಿಗೆ ಇದು ದೀಪಾವಳಿಯ ಕೊಡುಗೆ ಎಂದು ಪ್ರಧಾನಿ ಹೇಳಿದರು.

ADVERTISEMENT

ಗೌರವಧನ ಮತ್ತು ಪ್ರೋತ್ಸಾಹಧನ ಹೆಚ್ಚಳ ಅಕ್ಟೋಬರ್‌ ತಿಂಗಳಿನಿಂದ ಜಾರಿಯಾಗಲಿದೆ. ನವೆಂಬರ್‌ ತಿಂಗಳಲ್ಲಿ ಪರಿಷ್ಕೃತ ಪ್ರೋತ್ಸಾಹಧನ ಕೈಸೇರಲಿದೆ.

ಕೆಲವು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ಹತ್ತಿರವಾಗಿರುವ ಸಂದರ್ಭದಲ್ಲಿ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ. ಗೌರವಧನ ಮತ್ತು ಪ್ರೋತ್ಸಾಹಧನ ಹೆಚ್ಚಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು.

ಹೆಚ್ಚಳ ಎಷ್ಟು

* ತಿಂಗಳಿಗೆ ₹3,000 ಗೌರವಧನ ಪಡೆಯುತ್ತಿದ್ದವರಿಗೆ ₹4,500

* ತಿಂಗಳಿಗೆ ₹2,200 ಗೌರವಧನ ಪಡೆಯುತ್ತಿದ್ದ ಸಣ್ಣ ಅಂಗನವಾಡಿ ಕಾರ್ಯಕರ್ತೆಯರಿಗೆ ₹3,500

* ತಿಂಗಳಿಗೆ ₹1,500 ಗೌರವಧನ ಪಡೆಯುತ್ತಿದ್ದ ಅಂಗನವಾಡಿ ಸಹಾಯಕಿಯರಿಗೆ ₹2,250

* ಕಾಮನ್‌ ಅಪ್ಲಿಕೇಷನ್‌ ಸಾಫ್ಟ್‌ವೇರ್‌ (ಐಸಿಡಿಎಸ್‌–ಸಿಎಎಸ್‌) ಬಳಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಲು ನಿರ್ಧಾರ.ಈ ಪ್ರೋತ್ಸಾಹಧನ ಕಾರ್ಯಕ್ಷಮತೆಯ ಆಧಾರದಲ್ಲಿ ₹250ರಿಂದ ₹500ರವರೆಗೆ ಇರಲಿದೆ

* ಆಶಾ ಕಾರ್ಯಕರ್ತೆಯರು ಮತ್ತು ಅವರ ಸಹಾಯಕಿಯರಿಗೆ ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ವಾರ್ಷಿಕ ₹4 ಲಕ್ಷದ ಉಚಿತ ವಿಮೆ

ಇತರೆ ಅಂಶಗಳು

ದೇಶದಲ್ಲಿರುವ ಅಂಗನವಾಡಿಗಳ ಸಂಖ್ಯೆ:14 ಲಕ್ಷ

ಅಂಗನವಾಡಿಗಳ ಫಲಾನುಭವಿಗಳು (ಮಕ್ಕಳು, ಗರ್ಭಿಣಿಯರು ಮತ್ತು ಬಾನಂತಿಯರು): ₹ 10 ಕೋಟಿ

ಅಂಗನವಾಡಿ ಕಾರ್ಯಕರ್ತೆಯರು: 12.84 ಲಕ್ಷ

ಅಂಗನವಾಡಿ ಸಹಾಯಕಿಯರು: 10.50 ಲಕ್ಷ

ಒಂದು ಕೋಟಿ ನಕಲಿ ಫಲಾನುಭವಿಗಳು

ದೇಶದಾದ್ಯಂತ ಇರುವ ಅಂಗನವಾಡಿಗಳಲ್ಲಿ ಒಂದು ಕೋಟಿಗೂ ಹೆಚ್ಚು ನಕಲಿ ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿರುವುದು ಪತ್ತೆಯಾಗಿದೆ. ಈ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

ನಕಲಿ ಫಲಾನುಭವಿಗಳನ್ನು ಪತ್ತೆ ಮಾಡುವುದು ಮತ್ತು ಹೆಸರು ತೆಗೆದು ಹಾಕುವುದು ನಿರಂತವಾಗಿ ನಡೆಯುವ ಪ್ರಕ್ರಿಯೆ. ಈತನಕ ಒಂದು ಕೋಟಿ ಹೆಸರು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.