ADVERTISEMENT

ದಬ್ಬಾಳಿಕೆಗೆ ಮತ್ತೊಂದು ಹೆಸರೇ ಟಿಎಂಸಿ: ಪ್ರಧಾನಿ ಮೋದಿ ವಾಗ್ದಾಳಿ

ಪಿಟಿಐ
Published 2 ಮಾರ್ಚ್ 2024, 15:40 IST
Last Updated 2 ಮಾರ್ಚ್ 2024, 15:40 IST
ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ   

ಕೃಷ್ಣನಗರ (ಪಶ್ಚಿಮ ಬಂಗಾಳ): ‘ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸರ್ಕಾರವು ದಬ್ಬಾಳಿಕೆ, ಕುಟುಂಬ ರಾಜಕಾರಣ ಮತ್ತು ದ್ರೋಹಕ್ಕೆ ಮತ್ತೊಂದು ಹೆಸರಾಗಿದೆ. ಅಲ್ಲದೆ ಯೋಜನೆಗಳನ್ನು ಹಗರಣಗಳನ್ನಾಗಿ ಪರಿವರ್ತಿಸುವಲ್ಲಿ ಟಿಎಂಸಿ ನೈಪುಣ್ಯತೆ ಸಾಧಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ಶನಿವಾರ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ದೇಶ ಮತ್ತು ಪಶ್ಚಿಮ ಬಂಗಾಳದ ನಡುವೆ ಅವಿನಾಭಾವ ಸಂಬಂಧ ಇದೆ ಎಂದು ಒತ್ತಿಹೇಳುತ್ತಲೇ, ‘ರಾಜ್ಯದ ಎಲ್ಲ 42 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸುವಂತೆ’ ಮನವಿ ಮಾಡಿದರು. 2019ರ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಇಲ್ಲಿ ಗೆಲುವು ಸಾಧಿಸಿತ್ತು.

ಸಂದೇಶ್‌ಖಾಲಿಯಲ್ಲಿನ ಘಟನೆಗಳನ್ನು ಉಲ್ಲೇಖಿಸಿದ ಅವರು, ನೊಂದ ಮಹಿಳೆಯರ ಪರ ಇರಬೇಕಿದ್ದ ರಾಜ್ಯ ಸರ್ಕಾರವು ಆರೋಪಿಗಳ ಪರ ನಿಂತಿದೆ ಎಂದು ಆರೋಪಿಸಿದರು. 

ADVERTISEMENT

‘ಟಿಎಂಸಿಯ ಆದ್ಯತೆಯು ಭ್ರಷ್ಟಾಚಾರ, ಸ್ವಜನಪಕ್ಷಪಾತ ಆಗಿದೆಯೇ ಹೊರತು, ಅಭಿವೃದ್ಧಿಯಲ್ಲ’ ಎಂದು ಟೀಕಿಸಿದ ಪ್ರಧಾನಿ, ‘ಕೇಂದ್ರದ ಯೋಜನೆಗಳನ್ನು ತನ್ನದೆಂದು ಟಿಎಂಸಿ ಬಿಂಬಿಸಿಕೊಳ್ಳುತ್ತದೆ’ ಎಂದೂ ದೂಷಿಸಿದರು.

ಮುಂಬರುವ ವರ್ಷಗಳಲ್ಲಿ ಬಿಜೆಪಿಯು ದೇಶ ಮತ್ತು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಇದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 42 ಸ್ಥಾನಗಳಲ್ಲಿ ಕಮಲ ಅರಳಿಸಬೇಕು ಎಂದು ಹೇಳಿದರು. ರ್‍ಯಾಲಿಯಲ್ಲಿ ಸೇರಿದ್ದ ಜನರಿಗೆ ಧನ್ಯವಾದ ಅರ್ಪಿಸಿದ ಮೋದಿ ಅವರು, ‘ಈ ಬಾರಿ ನಾವು 400 ಸ್ಥಾನಗಳನ್ನು ದಾಟುತ್ತೇವೆ’ ಎಂಬುದರ ಸ್ಪಷ್ಟ ಸಂದೇಶ ಇಲ್ಲಿ ಕಾಣುತ್ತಿದೆ ಎಂದರು.

‘ರಾಜ್ಯದಲ್ಲಿ ತಾಯಂದಿರು, ಭೂಮಿ ಮತ್ತು ಜನರನ್ನು ಟಿಎಂಸಿ ಗೂಂಡಾಗಳಿಂದ ರಕ್ಷಿಸಬೇಕಿದೆ’ ಎಂದು ಅವರು ಇದೇ ವೇಳೆ ಹೇಳಿದರು.

ಸಂದೇಶ್‌ಖಾಲಿಯ ಆರೋಪಿಯನ್ನು ಬಂಧಿಸುವುದು (ಶಾಜಹಾನ್‌ ಶೇಖ್‌) ರಾಜ್ಯ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಆದರೆ ಪಶ್ಚಿಮ ಬಂಗಾಳದ ಮಹಿಳಾ ಶಕ್ತಿಯು ದುರ್ಗಿಯರಾಗಿ ನಿಂತಾಗ ಮತ್ತು ಬಿಜೆಪಿ ಕಾರ್ಯಕರ್ತರು ಅವರಿಗೆ ಸಾಥ್‌ ನೀಡಿದಾಗ ರಾಜ್ಯ ಸರ್ಕಾರ ತಲೆಬಾಗಲೇಬೇಕಾಯಿತು ಎಂದರು.

ಎರಡು ದಿನಗಳಲ್ಲಿ ರಾಜ್ಯದಲ್ಲಿ ₹ 22,000 ಕೋಟಿ ವೆಚ್ಚದ ವಿವಿಧ ಯೋಜನೆಗಳನ್ನು ಅನಾವಣಗೊಳಿಸಲಾಗಿದೆ ಎಂದು ಮೋದಿ ತಿಳಿಸಿದರು.

ವಿರೋಧ ಪಕ್ಷಗಳ ಕುಟುಕಿದ ಮೋದಿ

ಔರಂಗಾಬಾದ್‌ (ಬಿಹಾರ): ಕುಟುಂಬ ರಾಜಕಾರಣ ಮಾಡುತ್ತಿರುವವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೆದರುತ್ತಿದ್ದಾರೆ ಮತ್ತು ಸಂಸತ್ತನ್ನು ಪ್ರವೇಶಿಸಲು ಅವರು ರಾಜ್ಯಸಭಾ ಮಾರ್ಗ ಹುಡುಕುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿರೋಧ ಪಕ್ಷಗಳನ್ನು ಕುಟುಕಿದರು.

ಕುಟುಂಬ ರಾಜಕಾರಣದಲ್ಲಿ ತೊಡಗಿದ್ದ ಮತ್ತು ಜನರ ಮನದಲ್ಲಿ ಭಯ ಸೃಷ್ಟಿಸಿದ್ದವರನ್ನು ಎನ್‌ಡಿಎ ಬದಿಗೆ ತಳ್ಳಿದೆ ಎಂದು ಅವರು ಕಾಂಗ್ರೆಸ್‌– ಆರ್‌ಜೆಡಿ ಮೈತ್ರಿ ವಿರುದ್ಧ ಮಾತನಾಡಿದರು. ‘ಬಿಹಾರದಲ್ಲಿ ಮತ್ತೊಮ್ಮೆ ಡಬಲ್‌ ಎಂಜಿನ್‌ ಸರ್ಕಾರ ಬಂದಿದೆ’ ಎಂದ ಅವರು ‘ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಇಲ್ಲಿ ಕಾನೂನು ಆಡಳಿತ ನಡೆಸುತ್ತದೆ ಮತ್ತು ಮಹಿಳೆಯರು ಭಯದಿಂದ ಮುಕ್ತರಾಗಿ ಬದುಕು ಸಾಗಿಸುತ್ತಾರೆ ಎಂಬುದು ನಮ್ಮ ಗ್ಯಾರಂಟಿಯಾಗಿದೆ’ ಎಂದು ಮೋದಿ ಹೇಳಿದರು.

‘ಬಿಹಾರ ಸೀತಾ ಮಾತೆಯ ನಾಡು. ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪಿಸುವಾಗ ರಾಜ್ಯದಲ್ಲಿಯೂ ಉತ್ಸಾಹ ಎದ್ದು ಕಾಣುತ್ತಿತ್ತು. ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರಿಗೆ ಭಾರತ ರತ್ನ ನೀಡಿರುವುದು ಇಡೀ ಬಿಹಾರಕ್ಕೆ ಸಂದ ಗೌರವವಾಗಿದೆ’ ಎಂದರು.

‘ಹಿಂದೆ ಬಿಹಾರದಲ್ಲಿ ಯುವ ಪೀಳಿಗೆ ಭಯದಿಂದ ಬದುಕು ಸಾಗಿಸುತ್ತಿತ್ತು. ಅನೇಕರು ವಲಸೆ ಹೋದರು. ಆ ದಿನಗಳು ಮತ್ತೆ ಬರಲು ಬಿಡಬಾರದು’ ಎಂದು ಮೋದಿ ಹೇಳಿದರು. ಅಂದಾಜು ₹ 21400 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಮೋದಿ ಅನಾವರಣಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.