ADVERTISEMENT

ಮೋದಿ ಎರಡನೇ ಇನಿಂಗ್ಸ್‌: ಸಂಪುಟದಲ್ಲಿ 19 ಹೊಸ ಮುಖಗಳು

​ಪ್ರಜಾವಾಣಿ ವಾರ್ತೆ
Published 31 ಮೇ 2019, 4:29 IST
Last Updated 31 ಮೇ 2019, 4:29 IST
   

ನವದೆಹಲಿ: ರಾಷ್ಟ್ರಪತಿ ಭವನದ ಮುಂದೆ ಸಾವಿರಾರು ಗಣ್ಯರ ಸಮ್ಮುಖದಲ್ಲಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.

68 ವರ್ಷ ವಯಸ್ಸಿನ ಅವರು ಪೂರ್ಣ ಬಹುಮತದೊಂದಿಗೆ ಸತತವಾಗಿ ಎರಡನೇ ಅವಧಿಗೂ ಪ್ರಧಾನಿಯಾದ ಮೂರನೇ ವ್ಯಕ್ತಿಯಾಗಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಹಾಗೂ ಇಂದಿರಾ ಗಾಂಧಿ ಅವರು ಹಿಂದೆ ಈ ಸಾಧನೆ ಮಾಡಿದ್ದರು.

ಮೋದಿ ಅವರ ಜೊತೆಗೆ 24 ಮಂದಿ ಸಂಪುಟ ದರ್ಜೆ ಸಚಿವರು, 9 ಮಂದಿ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಹಾಗೂ 24 ಮಂದಿಗೆ ರಾಜ್ಯ ಸಚಿವರಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪ್ರಮಾಣವಚನ ಬೋಧಿಸಿದರು. ಅವರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ವಿದೇಶಾಂಗ ಇಲಾಖೆ ಮಾಜಿ ಕಾರ್ಯದರ್ಶಿ ಎಸ್‌. ಜೈಶಂಕರ್‌, ಡಿ.ವಿ. ಸದಾನಂದಗೌಡ, ನಿರ್ಮಲಾ ಸೀತಾರಾಮನ್‌, ರಾಮ್‌ವಿಲಾಸ್‌ ಪಾಸ್ವಾನ್‌ ಪ್ರಮಾಣವಚನ ಸ್ವೀಕರಿಸಿದರು.

ಸುಷ್ಮಾ ಸ್ವರಾಜ್‌, ಉಮಾಭಾರತಿ, ರಾಜ್ಯವರ್ಧನ ರಾಥೋಡ್‌, ಸುರೇಶ್‌ ಪ್ರಭು, ಮೇನಕಾ ಗಾಂಧಿ ಸೇರಿದಂತೆ ಹಿಂದಿನ ಸಂಪುಟದಲ್ಲಿದ್ದ 37 ಮಂದಿಯನ್ನು ಈ ಬಾರಿ ಕೈಬಿಡಲಾಗಿದೆ.

ಮಾಜಿ ಪ್ರಧಾನಿ ಮನಮೋಹನ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಉದ್ಯಮ ಕ್ಷೇತ್ರದ ಗಣ್ಯರು, ಚಿತ್ರ ನಟ, ನಟಿಯರು, ಬಿಮ್‌ಸ್ಟೆಕ್‌ ರಾಷ್ಟ್ರಗಳ ಪ್ರತಿನಿಧಿಗಳು, ಕ್ರೀಡಾಪಟುಗಳು ಸೇರಿದಂತೆ ಸುಮಾರು ಎಂಟು ಸಾವಿರ ಗಣ್ಯರು ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು.

ಪ್ರಮಾಣವಚನ ಸ್ವೀಕರಿಸಿದ ಕೂಡಲೇ ‘ಭಾರತದ ಸೇವೆ ಮಾಡಲು ಹೆಮ್ಮೆ ಎನಿಸುತ್ತಿದೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಸಾವಿಗೀಡಾದ ಯೋಧರ ಕುಟುಂಬದ ಸದಸ್ಯರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು.

ಹಿಂದೆ ಸರಿದ ನಿತೀಶ್‌
ಮೋದಿ ಅವರ ಪ್ರಮಾಣವಚನ ಸ್ವೀಕಾರಕ್ಕೆ ಒಂದೆರಡು ಗಂಟೆ ಬಾಕಿ ಇರುವಂತೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಜೆಡಿಯು ಮುಖಂಡ ನಿತೀಶ್‌ ಕುಮಾರ್‌ ಅವರು ತಮ್ಮ ಪಕ್ಷದ ಯಾರೂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಹೇಳಿದರು.

ಜೆಡಿಯು ಪಕ್ಷದ ರಾಜ್ಯಸಭಾ ಸದಸ್ಯ ಆರ್‌ಸಿಪಿ ಸಿಂಗ್‌ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಬರುವಂತೆ ಮೊದಲೇ ಆಹ್ವಾನ ನೀಡಲಾಗಿತ್ತು. ಆದರೆ, ಪಕ್ಷದ ಒಬ್ಬರಿಗೆ ಮಾತ್ರ ಅವಕಾಶ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

‘ಬಿಜೆಪಿಯ ಈ ನಿಲುವು ನಮಗೆ ಸ್ವಿಕಾರಾರ್ಹವಲ್ಲ. ನಾವು ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ. ಆದರೆ ಎನ್‌ಡಿಎಯ ಭಾಗವಾಗಿರುತ್ತೇವೆ’ ಎಂದು ನಿತೀಶ್‌ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಸುಷ್ಮಾಗೆ ಸ್ಥಾನವಿಲ್ಲ
ಮೋದಿ ಅವರ ಆಪ್ತ, ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ನಿರೀಕ್ಷೆಯಂತೆ ಸಚಿವರಾಗಿದ್ದಾರೆ. ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಪ್ರಭಾವಿ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್‌ ಅವರನ್ನು ಈ ಬಾರಿ ಕೈಬಿಡಲಾಗಿದೆ.

ಅನಾರೋಗ್ಯದ ಕಾರಣದಿಂದ ಸುಷ್ಮಾ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಎಸ್‌. ಜೈಶಂಕರ್‌ ಮತ್ತು ಬಾಲಾಸೋರ್‌ನಿಂದ ಆಯ್ಕೆಯಾದ ಪ್ರತಾಪ್‌ಚಂದ್ರ ಸಾರಂಗಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಈ ಬಾರಿಯ ಅಚ್ಚರಿಯಾಗಿದೆ.

ಕೆಸಿಆರ್‌, ಜಗನ್‌ ಗೈರು
ಅಮರಾವತಿ
: ವಿಶೇಷ ವಿಮಾನಕ್ಕೆ ದೆಹಲಿಯಲ್ಲಿ ಇಳಿಯಲು ಅನುಮತಿ ನಿರಾಕರಿಸಿದ್ದರಿಂದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಮತ್ತು ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರು ನರೇಂದ್ರ ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿಲ್ಲ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.