ADVERTISEMENT

ಹಕ್ಕುಗಳನ್ನು ನೀಡಲಾಗದ್ದಕ್ಕೆ ಆದಿವಾಸಿಗಳಿಗೆ ವನವಾಸಿಗಳು ಎನ್ನುವ ಮೋದಿ: ರಾಹುಲ್

ಪಿಟಿಐ
Published 14 ನವೆಂಬರ್ 2024, 11:32 IST
Last Updated 14 ನವೆಂಬರ್ 2024, 11:32 IST
<div class="paragraphs"><p>ರಾಹುಲ್ ಗಾಂಧಿ, ನರೇಂದ್ರ ಮೋದಿ</p></div>

ರಾಹುಲ್ ಗಾಂಧಿ, ನರೇಂದ್ರ ಮೋದಿ

   

ನಂದೂರ್ಬರ್‌/ಮುಂಬೈ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ನಂದೂರ್ಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಅವರು 'ಆದಿವಾಸಿ'ಗಳನ್ನು 'ವನವಾಸಿ'ಗಳು ಎನ್ನುತ್ತಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಮಾಜಿ ಪ್ರಧಾನಿಗಳಾದ ದಿ. ಇಂದಿರಾ ಗಾಂಧಿ, ದಿ. ರಾಜೀವ್‌ ಗಾಂಧಿ ಹಾಗೂ ರಾಜೀವ್‌ ಪತ್ನಿ ಸೋನಿಯಾ ಗಾಂಧಿ ಅವರು ಮಹಾರಾಷ್ಟ್ರದಲ್ಲಿ ಈ ಹಿಂದೆ ಕಾಂಗ್ರೆಸ್‌ ಪಕ್ಷದ ಪರ ನಂದೂರ್ಬರ್‌ನಿಂದಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು.

1998ರಲ್ಲಿ ಸೋನಿಯಾ ಅವರು ನಂದೂರ್ಬರ್‌ನಲ್ಲಿ ಭಾರೀ ಸಮಾವೇಶ ನಡೆಸುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಆಗ ಅವರು ಸರ್ಕಾರದಲ್ಲಿ ತಾವು ಯಾವುದೇ ಸ್ಥಾನ ಅಲಂಕರಿಸುವುದಿಲ್ಲ ಎಂದು ಘೋಷಿಸಿದ್ದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ರಚನೆಯಾದಾಗ, ಪ್ರಧಾನಿ ಮನಮೋಹನ್‌ ಸಿಂಗ್ ಹಾಗೂ ಆಗ ಯುಪಿಎ ಮೈತ್ರಿಕೂಟದ ಮುಖ್ಯಸ್ಥೆಯಾಗಿದ್ದ ಸೋನಿಯಾ ಗಾಂಧಿ ಅವರು, 2010ರ ಸೆಪ್ಟೆಂಬರ್‌ 29ರಂದು ಆಧಾರ್‌ ಕಾರ್ಡ್‌ ಯೋಜನೆಗೆ ಚಾಲನೆ ನೀಡಲು ನಂದೂರ್ಬರ್‌ನ ತೆಂಭ್ಲಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲಿನ ವ್ಯಕ್ತಿಗೇ, ಮೊದಲ ಆಧಾರ್‌ ಸಂಖ್ಯೆಯನ್ನು ನೀಡಲಾಗಿತ್ತು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್‌ 20ರಂದು ಮತದಾನ ನಡೆಯಲಿದೆ. ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಚುನಾವಣಾ ಪ್ರಚಾರದ ವೇಳೆ ಸಂವಿಧಾನದ ಕಿರು ಆವೃತ್ತಿ 'ಕೆಂಪು ಪುಸ್ತಕ'ವನ್ನು ಪ್ರದರ್ಶಿಸಿದ ರಾಹುಲ್‌, ಬ್ರಿಟೀಷರ ವಿರುದ್ಧ ಹೋರಾಡಿದ ಸ್ವಾತಂತ್ರ ಹೋರಾಟಗಾರ, ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಸಿದ್ಧಾಂತಗಳನ್ನು ಭಾರತದ ಸಂವಿಧಾನವು ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ.

'ಬಿರ್ಸಾ ಮುಂಡಾ ಅವರು ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದರು. ಇಂದು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಅಧಿಕಾರದಲ್ಲಿವೆ. ಮೋದಿ ಅವರು ನಿಮ್ಮನ್ನು 'ಆದಿವಾಸಿ'ಗಳು ಎನ್ನುವ ಬದಲು ವನವಾಸಿ'ಗಳು ಎಂದು ಕರೆಯುತ್ತಾರೆ. ಎರಡರ ನಡುವೆ ವ್ಯತ್ಯಾಸವಿದೆ. ಆದಿವಾಸಿಗಳು ಎಂದರೆ, ಮೂಲ ನಿವಾಸಿಗಳು ಎಂದು. ವನವಾಸಿಗಳು ಎಂದರೆ ಕಾಡಿನಲ್ಲಿ ವಾಸಿಸುವವರು ಎಂದು. ಆದಿವಾಸಿಗಳಿಗೆ ನೆಲ, ಜಲ ಮತ್ತು ಅರಣ್ಯದ ಮೇಲೆ ಹಕ್ಕು ಇದೆ. ವನವಾಸಿಗಳಿಗೆ ಅಂತಹ ಹಕ್ಕು ಇಲ್ಲ' ಎಂದಿದ್ದಾರೆ.

'ಬುಡಕಟ್ಟು ಜನರೆಂದರೆ ಅರಣ್ಯದ ಯಜಮಾನರು, ಈ ನೆಲದ ನಿಜವಾದ ಒಡೆಯರು. ದೇಶದ ಮೊದಲ ಮಾಲೀಕರಾಗಿರುವ ಬುಡಕಟ್ಟು ಜನರಿಗೆ ಮೊದಲ ಪ್ರಾಶಸ್ತ್ಯ ಸಿಗಬೇಕು. ವನವಾಸಿಗಳೆಂದರೆ, ಕಾಡಿನಲ್ಲಿ ಬದುಕುವವರು. ಬಿಜೆಪಿ ನಿಮ್ಮನ್ನು ಕಾಡಿನ ಜನರು ಎನ್ನುತ್ತಾರೆಯೇ ಹೊರತು, ಆದಿವಾಸಿಗಳು ಎಂದಲ್ಲ. ನಿಮಗೆ ನಿಮ್ಮ ಹಕ್ಕುಗಳನ್ನು ನೀಡಲು ಸಿದ್ಧರಿಲ್ಲದ ಕಾರಣ, ಅವರು ನಿಮ್ಮ ಹೆಸರುಗಳನ್ನು ಬದಲಿಸಿದ್ದಾರೆ' ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.