ನವದೆಹಲಿ: ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ‘ಚೌಕೀದಾರರು’ ದೇಶಕ್ಕೆ ಬೇಕಾಗಿದ್ದಾರೆಯೇ ಹೊರತು ರಾಜ– ಮಹಾರಾಜರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತಮ್ಮ ‘ಮೈ ಭಿ ಚೌಕೀದಾರ್’ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದ ಜನರೊಂದಿಗೆ ಭಾನುವಾರ ಸಂವಾದ ನಡೆಸಿದ ಅವರು, ‘2014ರಲ್ಲಿ ದೇಶದ ಜನರು ನನಗೆ ಅಧಿಕಾರ ನೀಡಿದರು. ಅಂದಿನಿಂದ ದೇಶದ ಸಂಪತ್ತನ್ನು ರಕ್ಷಿಸುವ ಯತ್ನ ಮಾಡಿದ್ದೇನೆ’ ಎಂದರು.
ಬಾಲಾಕೋಟ್ ವಾಯು ದಾಳಿಯ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ‘ದಾಳಿಯ ಶ್ರೇಯಸ್ಸು ಯೋಧರಿಗೆ ಸಲ್ಲುತ್ತದೆ. ದೇಶದ ಸೇನೆಯ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ಆ ಕಾರಣಕ್ಕೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೆ. ‘ಮೋದಿ ಚುನಾವಣೆಯಲ್ಲಿ ವ್ಯಸ್ತರಾಗಿದ್ದಾರೆ, ಆದ್ದರಿಂದ ಏನೂ ಮಾಡಲಾರರು’ ಎಂದು ಪಾಕಿಸ್ತಾನ ಭಾವಿಸಿತ್ತು. ಆದರೆ ನನಗೆ ದೇಶ ಮುಖ್ಯ, ಚುನಾವಣೆ ಅಲ್ಲ’ ಎಂದರು.
ಬಿಸಿ ತಟ್ಟಿದೆ: ‘ದೇಶದ ಸಂಪತ್ತನ್ನು ಲೂಟಿ ಮಾಡಿರುವ ಹಲವರಿಗೆ ಈಗ ಬಿಸಿ ತಟ್ಟಿದೆ. ಲೂಟಿ ಮಾಡಿರುವವರು ಪ್ರತಿಯೊಂದು ಪೈಸೆಯನ್ನೂ ಮರಳಿಸಬೇಕಾದ ದಿನ ಬರಲಿದೆ. ದೇಶದ ಜನರ ಬೆಂಬಲ– ಸಹಕಾರದಿಂದ ಇಂಥ ಭ್ರಷ್ಟರನ್ನು ಜೈಲಿನ ಬಾಗಿಲಿನವರೆಗೆ ಎಳೆದು ತರುವಲ್ಲಿ ನಾನು ಸಫಲನಾಗಿದ್ದೇನೆ. ಅಂಥವರಲ್ಲಿ ಕೆಲವರು ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.
ವಿರೋಧ ಪಕ್ಷಗಳನ್ನೂ ಟೀಕಿಸಿದ ಮೋದಿ, ‘ಪ್ರಧಾನಿ ಹುದ್ದೆಗೆ ನನ್ನ ಹೆಸರನ್ನು ಘೋಷಿಸಿದ ದಿನದಿಂದಲೆ ನನ್ನನ್ನು ಟೀಕಿಸುತ್ತಲೇ ಇನ್ನಷ್ಟು ಜನಪ್ರಿಯಗೊಳಿಸಿದರು’ ಎಂದರು.
ದೆಹಲಿಯ ತಾಲ್‌ಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 5000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಇದರ ಜೊತೆಯಲ್ಲೇ ಅವರು ದೇಶದ 500 ಪ್ರದೇಶಗಳ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಿದರು.
ಮೋದಿಗೆ ಕನ್ನಡಿಗ ರಾಕೇಶ್ ಪ್ರಸಾದ್ ಪ್ರಶ್ನೆ
* ಹಲವು ದಶಕಗಳಿಂದ ಭಾರತ ಅಭಿವೃದ್ಧಿಶೀಲ ಎಂಬ ಮಾತೇ ಕೇಳಿ ಬರುತ್ತಿದೆ. ಅಭಿವೃದ್ಧಿ ಹೊಂದಿದ ದೇಶ ಯಾವಾಗ ಆಗುತ್ತದೆ?
ಮೋದಿ ಉತ್ತರ: ದೇಶದ ಜನರಲ್ಲಿ ಜಾಗೃತಿ ಮೂಡುತ್ತಿರುವುದರಿಂದ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಹೆಚ್ಚು ಸಮಯ ಬೇಕಿಲ್ಲ. ಸಂಪನ್ಮೂಲ, ಸಾಮರ್ಥ್ಯ ಎರಡೂ ನಮ್ಮಲ್ಲಿವೆ.
2014ಕ್ಕೆ ಮೊದಲು ಅಂದಿನ ವಿತ್ತ ಸಚಿವರು ಭಾರತ ವಿಶ್ವದ ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದೆ. ಇದು ಹೆಮ್ಮೆ ಎಂದಿದ್ದರು ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು. ಈಗ ವಿಶ್ವದ ಆರ್ಥಿಕತೆಯಲ್ಲಿ 6ನೇ ಸ್ಥಾನ ತಲುಪಿದೆ.
ಭಾರತ 5 ಟ್ರಿಲಿಯನ್ ಡಾಲರ್‌ಗಳ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸೂಪರ್ ಆಗಿದ್ದೇವೆ. ಎಲ್ಲ ರಂಗಗಳಲ್ಲೂ ಪ್ರಬಲರಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.