ADVERTISEMENT

ಪುಲ್ವಾಮ ದಾಳಿ ವೇಳೆ ಮೋದಿ ಶೂಟಿಂಗ್‌ ಮಾಡಿದ ಕಾರ್ಯಕ್ರಮ ಮ್ಯಾನ್ ವರ್ಸಸ್ ವೈಲ್ಡ್ ?

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 11:27 IST
Last Updated 29 ಜುಲೈ 2019, 11:27 IST
   

ನವದೆಹಲಿ: ಡಿಸ್ಕವರಿ ಚಾನೆಲ್‌ನಲ್ಲಿ ಆಗಸ್ಟ್‌ 12ರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಳ್ಳಲಿದ್ದಾರೆ.ಡಿಸ್ಕವರಿ ಚಾನೆಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕಾರ್ಯಕ್ರಮದ ಪ್ರೊಮೊ ಶೇರ್ ಮಾಡಿದ್ದು 'ಯಾರಿಗೂ ತಿಳಿಯದ ಮೋದಿ ಅವರ ಮತ್ತೊಂದು ಆಯಾಮ ಇಲ್ಲಿ ತೆರೆದುಕೊಳ್ಳಲಿದೆ'ಎಂದು ಟ್ವೀಟ್ ಮಾಡಿದೆ.

ಮೋದಿಯವರ ಕಾರ್ಯಕ್ರಮದ ಬಗ್ಗೆ ಟ್ವಿಟರ್‌ನಲ್ಲಿ ಭಾರೀ ಚರ್ಚೆಯಾಗುತ್ತಿದ್ದು #PMModionDiscovery ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.

ಪುಲ್ವಾಮ ದಾಳಿ ವೇಳೆ ಮೋದಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು ಇದೇ ಕಾರ್ಯಕ್ರಮಕ್ಕಾಗಿ ಆಗಿತ್ತೇ?

ಪುಲ್ವಾಮ ದಾಳಿ ವೇಳೆ ಪ್ರಧಾನಿ ನರೇಂದ್ರ ಮೋದಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಶೂಟಿಂಗ್‌ ನಿರತರಾಗಿದ್ದರು ಎಂದುಕಾಂಗ್ರೆಸ್ ಆರೋಪಿಸಿತ್ತು. ಇದೀಗ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಪ್ರೊಮೊ ಸುದ್ದಿಯಾಗುತ್ತಿದ್ದಂತೆ ಈ ಆರೋಪ ಮತ್ತೆ ಸದ್ದು ಮಾಡುತ್ತಿದೆ ಎಂದುಸ್ಕ್ರಾಲ್ ಇನ್ ವರದಿ ಮಾಡಿದೆ.

ಫೆಬ್ರುವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಸಿಆರ್‌ಪಿಎಫ್‍ನ 40 ಮಂದಿ ಯೋಧರು ಹುತಾತ್ಮರಾಗಿದ್ದರು. ದಾಳಿ ನಡೆದು ದೇಶಕ್ಕೆ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವಾಗ ಪ್ರಧಾನಿ ನರೇಂದ್ರ ಮೋದಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಾಕ್ಷ್ಯಚಿತ್ರ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ ಮೋದಿಯವರಿಗೆ ಪುಲ್ವಾಮದಲ್ಲಿ ಉಗ್ರ ದಾಳಿ ಸಂಭವಿಸಿರುವ ಸುದ್ದಿ ತಲುಪಿದ್ದೇ ತಡವಾಗಿ. ಅದು ತಿಳಿದ ಕೂಡಲೇ ಅವರು ದೆಹಲಿಗೆ ಹೊರಟು ನಿಂತಿದ್ದರು. ದಾಳಿಯ ಸಂಪೂರ್ಣ ಮಾಹಿತಿ ಸಿಗುವವರೆಗೆ ಅವರು ನೀರು, ಆಹಾರ ಸೇವಿಸಿರಲಿಲ್ಲ ಎಂದು ಹೇಳಿತ್ತು.

ಪುಲ್ವಾಮ ದಾಳಿ ನಡೆದು ಒಂದು ವಾರದ ನಂತರ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನೇತಾರ ರಣದೀಪ್ ಸುರ್ಜೆವಾಲ, ಯೋಧರನ್ನು ಕಳೆದುಕೊಂಡ ದುಃಖದಲ್ಲಿ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವಾಗ ಪ್ರಧಾನಿ ಮೋದಿ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಶೂಟಿಂಗ್ ಮಾಡುತ್ತಾ, ಬೋಟ್‌ ರೈಡ್ ನಡೆಸಿ ಮೊಸಳೆಗಳನ್ನು ವೀಕ್ಷಣೆ ಮಾಡುತ್ತಿದ್ದರು ಎಂದು ಆರೋಪಿಸಿದ್ದರು.

ಈ ಫಿಲ್ಮ್ ಶೂಟಿಂಗ್ ಸಂಜೆ 6.30ರ ವರೆಗೆ ಮುಂದುವರಿದಿತ್ತು.ಅವರು 6.45ಕ್ಕೆ ಚಹಾ ಮತ್ತು ತಿಂಡಿ ಸೇವಿಸಿದ್ದರು.ಈ ರೀತಿಯ ದಾಳಿ ನಡೆದು ಗಂಟೆಗಳು ಕಳೆದಿದ್ದರೂ ಮೋದಿ ತಮ್ಮ ಬ್ರಾಂಡಿಂಗ್, ಫೋಟೊಶೂಟ್ ಮತ್ತು ತಿಂಡಿ ಸೇವನೆಯಲ್ಲಿ ಬ್ಯುಸಿಯಾಗಿದ್ದರು ಎಂದಿದ್ದರು ಸುರ್ಜೇವಾಲ. ತಮ್ಮ ಆರೋಪಕ್ಕೆ ಸಾಕ್ಷ್ಯವಾಗಿ ಕಾಂಗ್ರೆಸ್ ಮೋದಿಯವರ ಫೋಟೊವನ್ನು ಪ್ರಕಟಿಸಿತ್ತು.

ಇದಾದ ನಂತರ ನ್ಯೂಸ್ ಎಕ್ಸ್ ಮತ್ತು ಸಿಎನ್‌ಎನ್-ನ್ಯೂಸ್ 18 ಸುದ್ದಿವಾಹಿನಿಯ ಪತ್ರಕರ್ತರು ತಮ್ಮ ಟ್ವಿಟರ್ ಖಾತೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಅವರನ್ನು ಮೋದಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ಅನಾಮಿಕ ಸುದ್ದಿಮೂಲವೊಂದು ಹೇಳಿರುವುದಾಗಿ ಟ್ವೀಟಿಸಿದ್ದರು. ಮೋದಿಯವರಿಗೆ ಪುಲ್ವಾಮ ದಾಳಿ ವಿಷಯ ತಿಳಿಸದೇ ಇದ್ದುದ್ದಕ್ಕೆ ಡೊಭಾಲ್ ಅವರನ್ನು ಮೋದಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ಹೇಳಲಾಗಿತ್ತು.

ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ನಿರೂಪಕ ಬೇರ್‌ ಗ್ರಿಲ್ಸ್‌ ಜನವರಿ 26ರಂದು ಈ ಕಾರ್ಯಕ್ರಮದ ಶೂಟಿಂಗ್ ಬಗ್ಗೆ ಹಶ್ ಇಮೋಜಿ ಬಳಿಸಿ ಟ್ವೀಟ್ ಮಾಡಿದ್ದರು.

ಭಾರತದಲ್ಲಿ ಅದೊಂದು ವಿಶೇಷ ದಿನ.ವಿಶೇಷವಾದ ಶೂಟಿಂಗ್‌ಗಾಗಿ ನಾನು ಶೀಘ್ರದಲ್ಲೇ ಬರಲಿದ್ದೇನೆ ಎಂದು ಟ್ವೀಟಿಸಿದ್ದರು.ಇದರ ಬೆನ್ನಲ್ಲೇ ಫೆಬ್ರುವರಿ 12ರಂದು ಭಾರತಕ್ಕೆ ಬರಲು ವಿಮಾನ ಹತ್ತುವ ಮುನ್ನ ಸೆಲ್ಫಿಯೊಂದನ್ನುಟ್ವೀಟಿಸಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.ಈ ಎರಡೂ ಟ್ವೀಟ್‌ಗಳು ಈಗ ಡಿಲೀಟ್ ಆಗಿವೆ.

ಪುಲ್ವಾಮ ದಾಳಿ ವೇಳೆ ಮೋದಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ, ರಾಹುಲ್ ಜೀ ಭಾರತ ಸುಳ್ಳು ಸುದ್ದಿಗಳಿಂದ ಸುಸ್ತಾಗಿದೆ.ಬೆಳಗ್ಗಿನಿಂದ ಫೋಟೊ ಶೇರ್‌ ಮಾಡುತ್ತಿದ್ದೀರಿ.ದೇಶದ ಜನರಿಗೆ ತಪ್ಪಾದ ಮಾಹಿತಿ ನೀಡುವುದನ್ನು ನಿಲ್ಲಿಸಿ. ದಾಳಿ ಬಗ್ಗೆ ನಿಮಗೆ ಮುಂಚಿತವಾಗಿ ತಿಳಿದಿರಬಹುದು. ಆದರೆ ದೇಶದ ಜನರಿಗೆ ಗೊತ್ತಾಗಿದ್ದು ಸಂಜೆ ಹೊತ್ತಿಗೆ. ಮುಂದಿನ ಬಾರಿ ಹೊಸ ತಂತ್ರಪ್ರಯತ್ನಿಸಿ, ಅದರಲ್ಲಿ ಸೈನಿಕರ ತ್ಯಾಗವನ್ನು ಬಳಸಬೇಡಿ ಎಂದು ಟ್ವೀಟಿಸಿತ್ತು.

ಆಗಸ್ಟ್‌ 12ರ ರಾತ್ರಿ ಒಂಬತ್ತಕ್ಕೆ ಡಿಸ್ಕವರಿ ಚಾನೆಲ್‌ನಲ್ಲಿ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಯಾರಿಗೂ ತಿಳಿಯದ ಮೋದಿ ಅವರ ಮತ್ತೊಂದು ಆಯಾಮ ಇಲ್ಲಿ ತೆರೆದುಕೊಳ್ಳಲಿದ್ದು, 180 ರಾಷ್ಟ್ರಗಳಲ್ಲಿ ಇದುಪ್ರಸಾರಗೊಳ್ಳಲಿದೆ. ಪ್ರಾಣಿ ಸಂಕುಲ ಸಂರಕ್ಷಣೆ ಮತ್ತು ಪರಿಸರ ಬದಲಾವಣೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆದಿರುವುದಾಗಿ ಕಾರ್ಯಕ್ರಮದ ನಿರೂಪಕ ಬೇರ್‌ ಗ್ರಿಲ್ಸ್‌ ಸೋಮವಾರ ಟ್ವೀಟಿಸಿದ್ದಾರೆ.

ಸೋಮವಾರ ಡಿಸ್ಕವರಿ ಚಾನೆಲ್ ನೀಡಿದ ಪತ್ರಿಕಾ ಪ್ರಕಟಣೆ ಪ್ರಕಾರ, ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಶೂಟ್ ಮಾಡಿರುವ ವಿಶೇಷ ಸಂಚಿಕೆಯಾಗಿದೆ ಇದು.ಪ್ರಾಣಿ ಸಂಕುಲ ಸಂರಕ್ಷಣೆ ಮತ್ತು ಪರಿಸರ ಬದಲಾವಣೆಯ ಬಗ್ಗೆ ಬೆಳಕು ಚೆಲ್ಲುವ ಪಯಣ ಇದಾಗಿದೆ.
ಈ ಕಾರ್ಯಕ್ರಮದಲ್ಲಿ ಮೋದಿ ಪ್ರಕೃತಿಯೊಂದಿಗಿನ ತಮ್ಮ ಅನುಭವದ ಬಗ್ಗೆ ಹೇಳಲಿದ್ದು, ರೋಚಕ ವಿಷಯಗಳನ್ನೂತೆರೆದಿಡಲಿದ್ದಾರೆ.

ಡಿಸ್ಕವರಿ ಚಾನೆಲ್‌ಗೆ ಮೋದಿ ನೀಡಿದ ಹೇಳಿಕೆ ಹೀಗಿದೆ:
'ಕೆಲವು ವರ್ಷಗಳ ಕಾಲ ನಾನು ಪರ್ವತ ಮತ್ತು ಕಾಡಿನಲ್ಲಿ ಪ್ರಕೃತಿಯೊಂದಿಗೆ ಒಡನಾಡಿದ್ದೆ.ಈ ವರ್ಷಗಳಲ್ಲುಂಟಾದ ಅನುಭವಗಳು ನನ್ನ ಜೀವನದಲ್ಲಿ ಪ್ರಭಾವ ಬೀರಿದೆ.ರಾಜಕೀಯ ಹೊರತು ಪಡಿಸಿರುವ ಜೀವನದ ಬಗ್ಗೆ ಇರುವ ವಿಶೇಷ ಕಾರ್ಯಕ್ರಮ ಅದೂ ಪ್ರಕೃತಿಯ ಮಡಿಲಲ್ಲಿ ಎಂದು ಹೇಳಿದಾಗ ನಾನು ಅದರಲ್ಲಿ ಭಾಗವಹಿಸಲು ಉತ್ಸುಕನಾದೆ.
ನನಗೆ ಈ ಕಾರ್ಯಕ್ರಮದ ಮೂಲಕ ಭಾರತದ ಸಮೃದ್ಧ ಪರಿಸರ ಸಂಪತ್ತನ್ನು ಜಗತ್ತಿಗೆ ಪರಿಚಯಿಸುವಮತ್ತು ಪರಿಸರ ಸಂರಕ್ಷಣೆಯ ಪ್ರಾಧಾನ್ಯತೆ ಮತ್ತು ಪ್ರಕೃತಿಯೊಂದಿಗಿನ ಒಡನಾಟದ ಬಗ್ಗೆ ತೋರಿಸುವ ಅವಕಾಶ ಸಿಕ್ಕಿದೆ.ಅದ್ಭುತ ಚೈತನ್ಯ ಮತ್ತು ಪ್ರಕೃತಿಯನ್ನು ಹುಡುಕುವ ನೈಜದಾಹ ಹೊಂದಿರುವ ಬೇರ್ ಜತೆಗೆ ಕಾಡಿನಲ್ಲಿ ಮತ್ತೊಮ್ಮೆ ಕಾಲ ಕಳೆಯುವ ಅವಕಾಶ ಸಿಕ್ಕಿದ್ದು ಉತ್ತಮವಾದ ಅನುಭವ ಎಂದಿದ್ದಾರೆ'ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.