ADVERTISEMENT

ಸತತ 9 ಗಂಟೆ ವಿಚಾರಣೆ ಎದುರಿಸಿದ್ದ ಮೋದಿ ಒಂದು ಕಪ್ ಟೀ ಸಹ ಕುಡಿದಿರಲಿಲ್ಲ!

ಗುಜರಾತ್ ಗಲಭೆ

ಪಿಟಿಐ
Published 27 ಅಕ್ಟೋಬರ್ 2020, 6:00 IST
Last Updated 27 ಅಕ್ಟೋಬರ್ 2020, 6:00 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್ಐಟಿ) 100 ಪ್ರಶ್ನೆಗಳಿಗೆಸತತ 9 ಗಂಟೆಗಳ ಕಾಲ ಅಂದಿನ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರ ಮೋದಿ ಸಮಾಧಾನದಿಂದಲೇ ಉತ್ತರಿಸಿದ್ದರು. ಈ ಅವಧಿಯಲ್ಲಿ ತನಿಖಾಧಿಕಾರಿಗಳಿಂದ ಒಂದು ಕಪ್ ಟೀ ಸಹ ಸ್ವೀಕರಿಸಿರಲಿಲ್ಲ ಎಂದು ಅಂದಿನ ತನಿಖೆಯ ತಂಡದಲ್ಲಿ ಒಬ್ಬರಾಗಿದ್ದ ಆರ್.ಕೆ. ರಾಘವನ್ ಹೊಸ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಎಸ್‌ಐಟಿ ವಿಚಾರಣೆಗಾಗಿ ಕರೆದಾಗ ಮೋದಿಯವರು ಕೂಡಲೇ ಒಪ್ಪಿಗೆ ಸೂಚಿಸಿ ಗಾಂಧಿನಗರದ ಎಸ್‌ಐಟಿ ಕಚೇರಿಗೆ ಖುದ್ದಾಗಿ ಬಂದಿದ್ದರು. ಬರುವಾಗ ತಮ್ಮದೇ ನೀರಿನ ಬಾಟಲಿಯನ್ನು ತಂದಿದ್ದರು ಎಂದು ತಮ್ಮ ಆತ್ಮಚರಿತ್ರೆಯಾದ 'ಎ ರೋಡ್ ವೆಲ್ ಟ್ರಾವೆಲ್ಡ್‌'ನಲ್ಲಿ ಮೋದಿಯವರು ವಿಚಾರಣೆ ಎದುರಿಸಿದ ರೀತಿಯನ್ನು ಬರೆದುಕೊಂಡಿದ್ದಾರೆ.

2002ರ ಗುಜರಾತ್ ಗಲಭೆಗಳ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ಎಸ್‌ಐಟಿಯ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮುನ್ನ ರಾಘವನ್ ಅವರು ಸಿಬಿಐನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಬೋಫೋರ್ಸ್ ಹಗರಣ, 2000ರ ದಕ್ಷಿಣ ಆಫ್ರಿಕಾ ಕ್ರಿಕೆಟ್-ಮ್ಯಾಚ್ ಫಿಕ್ಸಿಂಗ್ ಪ್ರಕರಣ ಮತ್ತು ಮೇವು ಹಗರಣ ಸೇರಿದಂತೆ ಹಲವಾರು ಉನ್ನತ ತನಿಖಾ ತಂಡಗಳಲ್ಲಿ ಅವರು ಇದ್ದರು.

ಗಲಭೆ ಕುರಿತಂತೆ ಬೇರೆ ಕಡೆಯಲ್ಲಿ ವಿಚಾರಣೆ ನಡೆಸಿದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುವ ದೃಷ್ಟಿಯಿಂದಾಗಿ ಅವರೇ ಖುದ್ದಾಗಿ ಎಸ್‌ಐಟಿ ಕಚೇರಿಗೆ ಬರಬೇಕು ಎಂದು ನಾವು ಅವರ ಸಿಬ್ಬಂದಿಗೆ ತಿಳಿಸಿದ್ದೆವು. ಆಗ ಮೋದಿಯವರು ನಮ್ಮ ನಿಲುವನ್ನು ಅರ್ಥಮಾಡಿಕೊಂಡು ಗಾಂಧಿನಗರದ ಸರ್ಕಾರಿ ಸಂಕೀರ್ಣದೊಳಗಿನ ಎಸ್‌ಐಟಿ ಕಚೇರಿಗೆ ಬರಲು ಒಪ್ಪಿದರು. ನಾನು ಮತ್ತು ಮೋದಿ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎನ್ನುವ ಯಾವುದೇ ರೀತಿಯ ಆರೋಪ ಬರಬಾರದೆಂದೇ ಎಸ್‌ಐಟಿ ಸದಸ್ಯರಾದ ಅಶೋಕ್ ಮಲ್ಹೋತ್ರಾ ಅವರಿಗೆ ವಿಚಾರಣೆ ನಡೆಸಲು ಸೂಚಿಸಿದೆ ಎಂದು ಮಾಜಿ ಪೊಲೀಸ್ ಅಧಿಕಾರಿ ರಾಘವನ್ ಹೇಳಿದ್ದಾರೆ.

'ಎಸ್‌ಐಟಿ ಕಚೇರಿಯ ನನ್ನ ಕೊಠಡಿಯಲ್ಲಿ ಮೋದಿಯವರ ವಿಚಾರಣೆಯು ಒಂಬತ್ತು ಗಂಟೆಗಳ ಕಾಲ ನಡೆಯಿತು. ತಡರಾತ್ರಿಗೆ ವಿಚಾರಣೆ ಕೊನೆಗೊಂಡರೂ ಕೂಡ ಮೋದಿಯವರು ತಾಳ್ಮೆಯಿಂದಲೇ ಕುಳಿತಿದ್ದಾರೆ ಎಂದು ವಿಚಾರಣೆ ನಡೆಸಿದ ಮಲ್ಹೋತ್ರಾ ಹೇಳಿದ್ದರು ಎಂದು ರಾಘವನ್ ಹೇಳಿದ್ದಾರೆ.

ವಿಚಾರಣೆಯ ವೇಳೆ ಅವರು (ಮೋದಿ) ಎಂದಿಗೂ ನಮ್ಮ ಪ್ರಶ್ನೆಗಳನ್ನು ಪ್ರತಿದಾಳಿ ನಡೆಸಲಿಲ್ಲ. ನಾವು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವಾಗ ತಾಳ್ಮೆಯಿಂದ, ಸಮಾಧಾನದಿಂದಲೇ ವಿವರಿಸುತ್ತಿದ್ದರು. ಮಧ್ಯಾಹ್ನದ ಊಟದ ವಿರಾಮವನ್ನು ನಿರಾಕರಿಸಿದ್ದರು. ಅವರೇ ಕುಡಿಯಲು ನೀರಿನ ಬಾಟಲಿ ತಂದಿದ್ದರು. ಒಂದು ಕಪ್ ಚಹಾವನ್ನು ಕೂಡ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.

ವಿಚಾರಣೆಯ ಬಳಿಕ 2012ರ ಫೆಬ್ರವರಿಯಲ್ಲಿ ಎಸ್‌ಐಟಿಯು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದು, ಮೋದಿ ಮತ್ತು ಸರ್ಕಾರಿ ಹಿರಿಯ ಅಧಿಕಾರಿಗಳು ಸೇರಿದಂತೆ 63 ಮಂದಿಗೆ ಕ್ಲೀನ್ ಚಿಟ್ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.