ಮುಂಬೈ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರದಲ್ಲಿ ನಡೆಯುತ್ತಿದ್ದ ಕತ್ತರಿ, ಕಮೀಷನ್ ಮತ್ತು ಭ್ರಷ್ಟಾಚಾರದ ಪರಂಪರೆಯನ್ನು ಮೋದಿ ಯುಗದಲ್ಲಿ ಉರುಳಿಸಲಾಗಿದೆ ಎಂದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿಸಲಾಗಿದ್ದು, ಭ್ರಷ್ಟರು ಮತ್ತು ಮಾಫಿಯಾಗಳಿಗೆ ಭಯ ಹುಟ್ಟಿಸಲಾಗಿದೆ. ಮೋದಿ ಯುಗವು ನಿಯಂತ್ರಿತ, ನ್ಯಾಯ ಪರ, ಸೌಹಾರ್ದಯುತ ಅಭಿವೃದ್ಧಿಪರ ಆಡಳಿತವಾಗಿದೆ. ಸಮೃದ್ಧಿ ಮತ್ತು ಭದ್ರತೆ ಪ್ರಮುಖ ಧ್ಯೇಯಗಳಾಗಿವೆ ಎಂದು ಅವರು ಹೇಳಿದ್ದಾರೆ.
ಕೆಲವು ಪಕ್ಷಗಳು ಜಾತ್ಯತೀತತೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿವೆ. ಆದರೆ, ಬಿಜೆಪಿಯ ಜಾತ್ಯತೀತತೆಯು ಸಂವಿಧಾನಾತ್ಮಕ ಮತ್ತು ನೈತಿಕ ಬದ್ಧತೆ ಇರುವಂತದ್ದು ಎಂದುನಖ್ವಿ ಹೇಳಿದ್ದಾರೆ.
ಹುಸಿ ಜಾತ್ಯತೀತವಾದಿಗಳು ಮತ ಪಡೆಯಲು ಇದನ್ನು ಸಾಧನವಾಗಿ ಬಳಸುತ್ತಿದ್ದಾರೆ. ಈ ರಾಜಕೀಯ ವ್ಯಾಪಾರಿಗಳು 75 ವರ್ಷಗಳಿಂದ ಭಯ, ಅಸಹಿಷ್ಣುತೆಯ ವದಂತಿ, ಧಾರ್ಮಿಕ ಬಲೆಯಲ್ಲಿ ಅಲ್ಪಸಂಖ್ಯಾತರನ್ನು ಸಿಲುಕಿಸಿ ಅವರ ಮತಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಹಿಂದುತ್ವ ಎಂಬುದು ಜಾತ್ಯತೀತತೆಯ ಖಾತ್ರಿ ಮತ್ತು ಒಳಗೊಳ್ಳುವಿಕೆಯಾಗಿದೆ ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂಬ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಕಾಯ್ದೆಯು ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ತುಳಿತಕ್ಕೊಳಗಾಗಿರುವ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಪೌರತ್ವ ನೀಡುವ ಉದ್ದೇಶ ಹೊಂದಿದೆಯೇ ಹೊರತು ಪೌರತ್ವವನ್ನು ಕಿತ್ತುಕೊಳ್ಳುವುದಲ್ಲ ಎಂಬುದು ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸುತ್ತಿರುವವರಿಗೂ ತಿಳಿದಿದೆ’ ಎಂದಿದ್ಧಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.