ADVERTISEMENT

ಜೀವನದಲ್ಲಿ ಪ್ರಧಾನಿ ಮೋದಿ ಸಂವಿಧಾನವನ್ನು ಎಂದಿಗೂ ಓದಿಲ್ಲ: ರಾಹುಲ್ ಗಾಂಧಿ

ಪಿಟಿಐ
Published 14 ನವೆಂಬರ್ 2024, 10:58 IST
Last Updated 14 ನವೆಂಬರ್ 2024, 10:58 IST
<div class="paragraphs"><p>ನರೇಂದ್ರ ಮೋದಿ, ರಾಹುಲ್ ಗಾಂಧಿ</p></div>

ನರೇಂದ್ರ ಮೋದಿ, ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನಂದೂರ್‌ಬಾರ್ (ಮಹಾರಾಷ್ಟ್ರ): 'ಜೀವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು ಎಂದಿಗೂ ಓದಿಲ್ಲ. ಹಾಗಾಗಿ ಕೆಂಪು ಬಣ್ಣದ ಪುಸ್ತಕ ಖಾಲಿಯಾಗಿದೆ ಎಂದು ಭಾವಿಸಿದ್ದಾರೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ADVERTISEMENT

ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮೋದಿ ಅವರೇ ಇದು ಕೇವಲ ಒಂದು ಪುಸ್ತಕವಲ್ಲ. ಈ ಪುಸ್ತಕ ಖಾಲಿಯಾಗಿಲ್ಲ. ಭಾರತದ ಆತ್ಮ ಹಾಗೂ ಜ್ಞಾನವನ್ನು ಹೊಂದಿದೆ. ಬಿರ್ಸಾ ಮುಂಡಾ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಮತ್ತು ಬುದ್ಧ ಸೇರಿದಂತೆ ಮಹಾನ್ ನಾಯಕರ ತತ್ವಾದರ್ಶಗಳನ್ನು ಒಳಗೊಂಡಿದೆ' ಎಂದು ಪ್ರತಿಪಾದಿಸಿದ್ದಾರೆ.

'ಒಂದು ವೇಳೆ ಈ ಪುಸ್ತಕವನ್ನು ಖಾಲಿಯಾಗಿದೆ ಎಂದು ಕರೆದರೆ ಅದು ಈ ದೇಶದ ನಾಯಕರನ್ನು ಅವಮಾನಿಸಿದಂತೆ' ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಚುನಾವಣಾ ಸಮಾವೇಶಗಳಲ್ಲಿ ಪ್ರದರ್ಶಿಸುವ ಕೆಂಪು ಬಣ್ಣದ ಪುಸಕ್ತದ ಕುರಿತು ಬಿಜೆಪಿ ಆಕ್ಷೇಪವನ್ನು ಎತ್ತಿತ್ತು. ಕೆಂಪು ಬಣ್ಣ ಪುಸ್ತಕದ ಒಳಭಾಗ ಖಾಲಿಯಾಗಿದೆ ಎಂದು ಆರೋಪಿಸಿತ್ತು. ಸಂವಿಧಾನದ ಪ್ರತಿಯನ್ನು 'ನಗರ ನಕ್ಸಲಿಸಂ' ಜತೆ ಹೋಲಿಕೆ ಮಾಡಲಾಗಿತ್ತು.

ಈ ಕುರಿತು ತಿರುಗೇಟು ನೀಡಿರುವ ರಾಹುಲ್ ಗಾಂಧಿ, 'ಪುಸ್ತಕದ ಬಣ್ಣ ಕೆಂಪು ಅಥವಾ ನೀಲಿ ಎಂಬುದರ ಬಗ್ಗೆ ನಾವು ಚಿಂತಿತರಾಗಿಲ್ಲ. ಸಂವಿಧಾನವನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಅದಕ್ಕಾಗಿ ಪಣತೊಟ್ಟಿದ್ದೇವೆ. ನನ್ನಲ್ಲಿರುವ ಸಂವಿಧಾನದ ಪ್ರತಿ ಖಾಲಿಯಾಗಿದೆ ಎಂದು ಪ್ರಧಾನಿ ಮೋದಿ ಭಾವಿಸುತ್ತಾರೆ. ಏಕೆಂದರೆ ಅದರಲ್ಲಿರುವ ಅಂಶಗಳ ಬಗ್ಗೆ ಪ್ರಧಾನಿಗೆ ಅರಿವಿಲ್ಲ. ಜೀವನದಲ್ಲಿ ಎಂದೂ ಅದನ್ನು ಓದಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಂಪು ಬಣ್ಣದ ಪಾಕೆಟ್‌ ಆಕಾರದ ಸಂವಿಧಾನದ ಪತ್ರಿಯನ್ನು ತೋರಿಸುತ್ತಾ, ‘ ದೇಶದ ಸ್ವಾತಂತ್ರ್ಯಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟ ಬಿರ್ಸಾ ಮುಂಡಾ ಅವರ ಸಿದ್ಧಾಂತವನ್ನು ಭಾರತದ ಸಂವಿಧಾನವು ಪ್ರತಿಧ್ವನಿಸುತ್ತದೆ. ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಹೋರಾಡಿದರು. ಇಂದು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಹೋರಾಡಬೇಕಿದೆ’ ಎಂದು ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ 'ವನವಾಸಿ' ಎಂದು ಕರೆಯುವ ಮೂಲಕ ಆದಿವಾಸಿಗಳನ್ನು ಅವಮಾನಿಸಿದೆ ಎಂದೂ ರಾಹುಲ್ ಗಾಂಧಿ ದೂರಿದ್ದಾರೆ.

'ಆದಿವಾಸಿಗಳು ದೇಶದ ಮೊದಲ ಮಾಲೀಕರಾಗಿದ್ದು, ಜಲ, ಅರಣ್ಯ ಮತ್ತು ಜಮೀನಿನ ಮೇಲೆ ಮೊದಲ ಹಕ್ಕನ್ನು ಹೊಂದಿದ್ದಾರೆ. ಆದರೆ ಆದಿವಾಸಿಗಳು ಕಾಡಿನಲ್ಲೇ ಉಳಿಯಬೇಕೆಂದು ಬಿಜೆಪಿ ಬಯಸುತ್ತದೆ' ಎಂದು ಆರೋಪಿಸಿದ್ದಾರೆ.

ನಂದುರ್‌ಬಾರ್‌–ಗಾಂಧಿ ಕುಟುಂಬದ ನಂಟು

ಗಾಂಧಿ ಕುಟುಂಬ ಮತ್ತು ನಂದುರ್‌ಬಾರ್‌ ಮಧ್ಯೆ ಅಪರೂಪದ ನಂಟಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅವರ ಪುತ್ರ ರಾಜೀವ್ ಗಾಂಧಿ, ಅವರ ಪತ್ನಿ ಸೋನಿಯಾ ಗಾಂಧಿ ಅವರು ನಂದುರ್‌ಬಾರ್‌ ಮೂಲಕವೇ ಮಹಾರಾಷ್ಟ್ರದಲ್ಲಿ ಚುನಾವಣೆ ಪ್ರಚಾರ ಆರಂಭಿಸುತ್ತಿದ್ದರು.

1998ರಲ್ಲಿ ಸೋನಿಯಾ ಗಾಂಧಿ ಅವರು ನಂದುರ್‌ಬಾರ್‌ನಲ್ಲಿ ನಡೆದ ಬೃಹತ್‌ ರ‍್ಯಾಲಿಯಲ್ಲಿ ಮಾತನಾಡಿ, ಯಾವುದೇ ಅಧಿಕಾರಯುತ ಸ್ಥಾನ ಬೇಡ ಎಂದು ಘೋಷಿಸಿದ್ದರು.ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2010 ಸೆಪ್ಟೆಂಬರ್‌ 29ರಂದು ಪ್ರಧಾನಿ ಡಾ.ಮನಮೋಹನ್‌ ಸಿಂಗ್‌, ಸೋನಿಯಾ ಗಾಂಧಿ ಅವರು ಆಧಾರ್‌ ಕಾರ್ಡ್‌ ಕಾರ್ಯಕ್ರಮಕ್ಕೆ ನಂದುರ್‌ಬಾರ್‌ ಜಿಲ್ಲೆಯ ಟೆಮ್ಲಿ ಗ್ರಾಮದಲ್ಲಿ ಚಾಲನೆ ನೀಡಿ, ಒಬ್ಬರಿಗೆ  ಆಧಾರ್‌ ಗುರುತಿನ ಸಂಖ್ಯೆಯನ್ನು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.