ಇಂದು ಭಾರತಕ್ಕೆ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಇದೇ ಹಿನ್ನೆಲೆಯಲ್ಲಿ ದೆಹಲಿ ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಧ್ಜಜಾರೋಹಣ ನೆರವೇರಿಸಿದರು.ಶ್ವೇತ ವರ್ಣ ವಸ್ತ್ರ, ಹಳದಿ ಮುಂಡಾಸು ಧರಿಸಿದ್ದ ಪ್ರಧಾನಿ ಮೋದಿ, ಮೊದಲಿಗೆರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ನಮಿಸಿದರು. ನಂತರ ಅಲ್ಲಿಂದ ನೇರವಾಗಿ ಕೆಂಪುಕೋಟೆಗೆ ಆಗಮಿಸಿದ ಅವರು ದ್ವಜಾರೋಹಣ ನೆರವೇರಿಸಿದರು. ದೇಶವನ್ನು ಉದ್ದೇಶಿ ಮೋದಿ ಭಾಷಣ ಮಾಡುತ್ತಿದ್ದಾರೆ. ಭಾಷಣದಲ್ಲಿ ಅವರು ಏನು ಹೇಳಿದರು? ಇಲ್ಲಿದೆ ಮಾಹಿತಿ.
9.00: ಜನರಿಗೆ ಕೊಡಲು ಸಾಕಷ್ಟಿದೆ
ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ. ಡಿಜಿಟಲ್ ಹಣ ವರ್ಗಾವಣೆಯನ್ನು ಪ್ರೋತ್ಸಾಹಿಸೋಣ. ಪ್ರವಾಸಿ ತಾಣಗಳಿಗಾಗಿ ವಿದೇಶಕ್ಕೆ ಹೋಗುವ ಬದಲು 2022ರ ಹೊತ್ತಿದೆ ದೇಶದ ಪ್ರಮುಖ 15 ಪ್ರವಾಸಿ ತಾಣಗಳಿಗೆ ಭೇಟಿ ಕೊಡೋಣ.ದೇಶದ ಜನರಿಗೆ ನೀಡಲು ನಮ್ಮ ಸರ್ಕಾರದ ಬಳಿ ಸಾಕಷ್ಟಿದೆ.
8.55: ಮುಖ್ಯ ಸೇನಾ ಸಿಬ್ಬಂದಿ ಹುದ್ದೆ ಸೃಷ್ಟಿ
ಸೇನೆ ನಮ್ಮ ಹೆಮ್ಮೆ. ಸೇನೆಯಲ್ಲಿನ ಸಮನ್ವಯತೆಯನ್ನು ಹೆಚ್ಚು ಮಾಡಲು ನಾನು ಇಂದು ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡುತ್ತಿದ್ದೇನೆ. ಇನ್ನು ಮುಂದೆ ಮುಖ್ಯ ಸೇನಾ ಸಿಬ್ಬಂದಿ(Chief of Defence Staff- CDS) ಎಂಬ ಹುದ್ದೆ ಸೃಷ್ಟಿಯಾಗಲಿದೆ. ಸೇನೆ ಇನ್ನು ಮುಂದೆ ಮತ್ತಷ್ಟು ಬಲಯುತಗೊಳ್ಳಲಿದೆ.
8.51: ಭಯೋತ್ಪಾದನೆಗೆ ನೆರವು ನೀಡುತ್ತಿರುವವರು ಬಯಲಾಗಲಿದ್ದಾರೆ
ಭಯೋತ್ಪಾದನೆಯನ್ನು ಯಾರೆಲ್ಲ ಪೋಷಿಸುತ್ತಿದ್ದಾರೋ ಅವರೆಲ್ಲರೂ ಬಯಲಾಗಲಿದ್ದಾರೆ. ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘನಿಸ್ತಾನಗಳು ಭಯೋತ್ಪಾದನೆಯಿಂದ ತೊಂದರೆಗೊಳಗಾಗಿವೆ. ಈ ದೇಶಗಳೆಲ್ಲ ಒಟ್ಟಾಗಬೇಕು. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು.
8.43: ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಲು ವಿದೇಶಗಳು ಉತ್ಸುಕ
ಇಂದು, ದೇಶದಲ್ಲಿ ಸುಸ್ಥಿರ ಸರ್ಕಾರವಿದೆ. ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಹಲವು ದೇಶಗಳು ಉತ್ಸುಕವಾಗಿವೆ. ದೇಶದ ಅಭಿವೃದ್ಧಿಗೆ ವೇಗ ನೀಡಿದ್ದೇವೆ. ದೇಶದ ಆರ್ಥಿಕತೆ ಬಲವಾಗುತ್ತಿದೆ.
8.25: ಹಲವು ಕಾನೂನುಗಳನ್ನು ನಾವು ರದ್ದು ಮಾಡಿದ್ದೇವೆ
ಜನಸಾಮಾನ್ಯರ ಬದುಕಿನಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೇ ಎಂದು ನಾನು ಸದಾಪ್ರಶ್ನೆ ಮಾಡುತ್ತಿರುತ್ತೇನೆ. ಅವರ ಇಚ್ಛೆಯಂತೆ ಬದುಕಲು ಜನರಿಗೆ ಅವಕಾಶ ಕಲ್ಪಿಸೋಣ. ಅದೇ ಕಾರಣಕ್ಕೆ ನಾವು ಹಲವು ಕಾನೂನುಗಳನ್ನು ರದ್ದು ಮಾಡಿದ್ದೇವೆ.
21ನೇ ಶತಮಾನಕ್ಕೆ ತಕ್ಕಂತೆ ನಾವು ಮೂಲ ಸೌಕರ್ಯ ಕಲ್ಪಿಸುತ್ತಿದ್ದೇವೆ. ದೇಶದ ಮೂಲ ಸೌಕರ್ಯಕ್ಕಾಗಿ 100 ಕೋಟಿಗಳನ್ನು ಮೀಸಲಿಟ್ಟಿದ್ದೇವೆ.
8.25: ಕಪ್ಪು ಹಣ ತರಲು ಪ್ರಯತ್ನಗಳು ನಡೆಯುತ್ತಿವೆ
ಭ್ರಷ್ಟಾಚಾರ ಕೊನೆಗಾಣಿಸಲು, ಕಪ್ಪು ಹಣವನ್ನು ತರಲು ಪ್ರಯತ್ನಗಳು ನಡೆಯುತ್ತಿವೆ. ಭಾರತ ಈ ಸಮಸ್ಯೆಗಳಲ್ಲಿ 70 ವರ್ಷಗಳಿಂದ ಸಿಲುಕಿಕೊಂಡಿದೆ. ಪ್ರಾಮಾಣಿಕತೆಗೆ ನಾವು ಬೆಲೆ ಕೊಡೋಣ.
8.19: ಸಣ್ಣ ಕುಟುಂಬ ಮಾಡಿಕೊಂಡರೆ ದೇಶದ ಅಭಿವೃದ್ಧಿಗೆ ನೆರವಾದಂತೆ
ಜನಸಂಖ್ಯಾ ಸ್ಫೋಟವು ಮುಂದಿನ ಪೀಳಿಗೆಯ ಎದುರು ಹಲವು ಸಮಸ್ಯೆಗಳನ್ನು ಒಡ್ಡಲಿದೆ. ಸಣ್ಣ ಕುಟುಂಬಕ್ಕೆ ಯಾರು ಆದ್ಯತೆ ನೀಡುವರೋ ಅವರು ದೇಶದ ಅಭಿವೃದ್ಧಿಗೆ ನೆರವಾದಂತೆ
8.10: ರಾಜಕೀಯ ಬರುತ್ತೆ, ಹೋಗುತ್ತೆ...
ನಾವು ವಿಭಿನ್ನವಾಗಿ ಯೋಚಿಸಬೇಕು. ಆದರೆ ನಮಗೆ ದೇಶ ಮೊದಲಾಗಿರಬೇಕು. ರಾಜಕೀಯ ಬರುತ್ತದೆ, ಹೋಗುತ್ತದೆ. ಆದರೆ, ದೇಶದ ಹಿತಕ್ಕಾಗಿ ನಾವು ಕೈಗೊಂಡ ಕ್ರಮಗಳು ಶಾಶ್ವತವಾಗಿರುತ್ತವೆ.
8.10: 370ನೇ ವಿಧಿಯನ್ನು ಶಾಶ್ವತಗೊಳಿಸಲಿಲ್ಲ ಏಕೆ?
370ನೇ ವಿಧಿಯನ್ನು ಬೆಂಬಲಿಸುತ್ತಿರುವವರನ್ನು ದೇಶ ಪ್ರಶ್ನೆ ಮಾಡುತ್ತಿದೆ. ಈ ವಿಧಿ ಅಷ್ಟು ಪ್ರಮುಖವಾಗಿದ್ದರೆ ಶಾಶ್ವತಗೊಳಿಸಿರಲಿಲ್ಲ ಏಕೆ? ಬಹುಮತದೊಂದಿಗೆ ಸರ್ಕಾರಗಳನ್ನು ನಡೆಸಿದ್ದವರು ಈ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿತ್ತಲ್ಲವೇ?
8.05: ಕಾಶ್ಮೀರದ ಹಿಂದಿನ ವ್ಯವಸ್ಥೆಯನ್ನು ನಾವು ಒಪ್ಪಲು ಸಾಧ್ಯವೇ?
ಜಮ್ಮು ಕಾಶ್ಮೀರದಲ್ಲಿ ಹಿಂದೆ ಇದ್ದ ವ್ಯವಸ್ಥೆಯು ಅಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ದಾರಿ ಮಾಡಿಕೊಟ್ಟಿತ್ತು. ಮಹಿಳೆಯರ ಹಕ್ಕುಗಳು, ಮಕ್ಕಳು, ದಲಿತರು, ಬುಡಕಟ್ಟು ಸಮುದಾಯದವಿಚಾರಕ್ಕೆ ಬಂದರ ತಾರತಮ್ಯಕ್ಕೆ ಎಡಮಾಡಿಕೊಟ್ಟಿತ್ತು. ಸಫಾಯಿ ಕರ್ಮಚಾರಿಗಳ ಕನಸುಗಳು ಕನಸಾಗಿಯೇ ಉಳಿದಿದ್ದವು. ಇದನ್ನೆಲ್ಲ ನಾವು ಒಪ್ಪಲು ಸಾಧ್ಯವಿತ್ತೇ?
7.59: ಈ ದೇಶ ಬದಲಾಗುವುದೇ ಎಂಬ ಜನರಪ್ರಶ್ನೆ ಉತ್ತರ ಸಿಕ್ಕಿದೆ.
2014ರ ಚುನಾವಣೆಗೂ ಮೊದಲು ಜನರ ಭಾವನೆಗಳನ್ನು ಅರಿತುಕೊಳ್ಳಲುನಾನು ದೇಶಾದ್ಯಂತ ಸಂಚಾರ ಮಾಡಿದ್ದೆ. ಆಗ ಜನರಲ್ಲಿ ನಿರಾಶೆ ಮನೆ ಮಾಡಿತ್ತು. ಈ ದೇಶ ಬದಲಾಗಲು ಸಾಧ್ಯವೇ ಎಂದು ಜನ ಚಿಂತೆ ಮಾಡುತ್ತಿದ್ದರು. ಆದರೆ, 2019ರ ಈ ಸಮಯದಲ್ಲಿ ನನಗೆ ಆಶ್ಚರ್ಯವಾಗುತ್ತಿದೆ. ಜನರ ಭಾವನೆಗಳು ಬದಲಾಗಿವೆ. ನಿರಾಶೆ ಬದಿಗಿಟ್ಟು ಆಶಾಭಾವದಲ್ಲಿ ಬದುಕುತ್ತಿದ್ದಾರೆ. ಈ ದೇಶ ಬದಲಾವಣೆಯಾಗುತ್ತದೆ ಎಂಬುದನ್ನು ಅವರೀಗ ನಂಬಿದ್ದಾರೆ.
7.53: ಪ್ರವಾಹದಲ್ಲಿ ಸಿಲುಕಿರುವವರ ಬೆನ್ನಿಗಿದ್ದೇವೆ
ನಾವಿಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಆದರೆ, ದೇಶದ ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಜನ ಸಂತ್ರಸ್ತರಾಗಿದ್ದಾರೆ. ಅಂಥವರ ಪರವಾಗಿ ನಾವಿದ್ದೇವೆ.
7.50: ಜಲಶಕ್ತಿ ಸಚಿವಾಲಯ ರಚನೆ
ನೀರಿನ ಪ್ರಾಮುಖ್ಯತೆ ಮತ್ತು ಸಂರಕ್ಷಣೆಗೆಬಗ್ಗೆ ಈ ದೇಶಕ್ಕೆ ಸ್ಪಷ್ಟವಾದ ಅರಿವಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ ಜಲಶಕ್ತಿ ಸಚಿವಾಲಯವನ್ನು ಹೊಸದಾಗಿ ರಚಿಸಿದೆ. ವೈದ್ಯಕೀಯ ಕ್ಷೇತ್ರವನ್ನು ಜನಸ್ನೇಹಿಗೊಳಿಸಲೂ ನಾವು ದಿಟ್ಟ ಹೆಜ್ಜೆಗಳನ್ನಿಟ್ಟಿದ್ದೇವೆ.
7.40:ಪಟೇಲರ ಕನಸು ಸಾಕಾರ ಮಾಡುವತ್ತ ಹೆಜ್ಜೆ
ಕೇಂದ್ರದಲ್ಲಿ ಸರ್ಕಾರ ರಚನೆಯಾಗಿ ಇನ್ನೂ ಹತ್ತು ವಾರವಾಗಿಲ್ಲ. ಈ ಸಣ್ಣ ಅವಧಿಯಲ್ಲೇ ಸರ್ಕಾರ ಎಲ್ಲ ರಂಗದಲ್ಲೂ ಮಹತ್ತರ ಹೆಜ್ಜೆಗಳನ್ನಿಟ್ಟಿದೆ. ಸಂವಿಧಾನದ ವಿಧಿ 370 ಅನ್ನು ರದ್ದು ಮಾಡಿದ್ದು ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಕನಸು ಸಾಕಾರ ಮಾಡುವ ಕಡೆಗಿನ ಮಹತ್ವದ ಹಜ್ಜೆ.
ಕೆಂಪುಕೋಟೆಯಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಟ್ವೀಟ್ ಮೂಲಕ ಶುಭ ಕೋರಿದ ಮೋದಿ
‘ಭಾರತೀಯರಿಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಜೈ ಹಿಂದ್,’ ಎಂದು ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರು ದೇಶದ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.