ನವದೆಹಲಿ (ಪಿಟಿಐ): ‘ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶಕ್ಕೆ ಸ್ವತಂತ್ರವಾದ ಭದ್ರತಾ ನೀತಿಯನ್ನು ರೂಪಿಸಿ, ಜಾರಿಗೊಳಿಸಲಾಯಿತು. ಈ ಭದ್ರತಾ ಕಾರ್ಯತಂತ್ರ ವಿದೇಶಾಂಗ ನೀತಿಯ ಪ್ರಭಾವಕ್ಕೆ ಒಳಗಾಗಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದರು.
‘ರುಸ್ತಂಜಿ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಿಎಸ್‌ಎಫ್ ಸಿಬ್ಬಂದಿಗೆ ಹಾಗೂ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಯೋಧರ ಕುಟುಂಬದವರಿಗೆ ಶೌರ್ಯಪದಕಗಳನ್ನು ಸಹ ಅವರು ಇದೇ ಸಂದರ್ಭದಲ್ಲಿ ಪ್ರದಾನ ಮಾಡಿದರು.
‘ದೇಶದ ಭದ್ರತೆಗೆ ಸಂಬಂಧಿಸಿ ಸ್ವತಂತ್ರವಾದ ನೀತಿ ಇದೆಯೇ, ಇಲ್ಲವೇ ಎಂಬ ಬಗ್ಗೆ ನಾನು ವಿಚಾರ ಮಾಡುತ್ತಿದ್ದೆ. ಆದರೆ, ಮೋದಿ ಅವರು ಪ್ರಧಾನಿಯಾಗುವವರೆಗೆ ನಮ್ಮಲ್ಲಿ ಅಂಥ ಯಾವುದೇ ನೀತಿ ಇರಲಿಲ್ಲ ’ ಎಂದು ಶಾ ಹೇಳಿದರು.
‘ಎಲ್ಲ ರಾಷ್ಟ್ರಗಳೊಂದಿಗೆ ಶಾಂತಿಯುತ ಸಂಬಂಧ ಹೊಂದಬೇಕು ಎಂಬುದು ನಮ್ಮ ಆಶಯ. ಯಾರಾದರೂ ನಮ್ಮ ಶಾಂತಿಗೆ ಭಂಗ ತಂದರೆ, ನಮ್ಮ ಸಾರ್ವಭೌಮತೆಗೆ ಸವಾಲೊಡಿದ್ದೇಯಾದರೆ, ಅವರಿಗೆ ಅವರದೇ ಆದ ಭಾಷೆಯಲ್ಲಿ ಉತ್ತರ ನೀಡುವುದು ನಮ್ಮ ಭದ್ರತಾ ನೀತಿಯ ಆದ್ಯತೆಯಾಗಿದೆ’ ಎಂದು ಹೇಳಿದರು.
‘ಇಂಥ ನೀತಿಯನ್ನು ಹೊಂದುವ ಮೂಲಕ ಮೋದಿಯವರು ದೊಡ್ಡ ಕಾರ್ಯ ಮಾಡಿದ್ದಾರೆ. ಈ ನೀತಿ ಏನು ಎಂಬುದು ಎಲ್ಲರಿಗೂ ಗೊತ್ತು, ಅದರ ಬಗ್ಗೆ ವಿಸ್ತಾರವಾಗಿ ಹೇಳಲು ಹೋಗುವುದಿಲ್ಲ’ ಎಂದೂ ಅವರು ಹೇಳಿದರು.
‘ದೇಶದ ಗಡಿ ಪೈಕಿ ಶೇ 3ರಷ್ಟು ಭಾಗಕ್ಕೆ ಬೇಲಿ ಇರಲಿಲ್ಲ. ಇದು ಉಗ್ರರ ಒಳನುಸುಳುವಿಕೆಗೆ ದಾರಿ ಮಾಡಿಕೊಟ್ಟಿತ್ತು. ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಮಾದಕವಸ್ತುಗಳ ಸಾಗಾಟಕ್ಕೂ ಅವಕಾಶ ಮಾಡಿಕೊಟ್ಟಂತಾಗಿತ್ತು. ಅದರೆ, ದೇಶದ ಗಡಿಗೆ ಸಂಪೂರ್ಣವಾಗಿ ಬೇಲಿ ಅಳಡಿಸುವ ಕಾರ್ಯ ಮುಂದಿನ ವರ್ಷ ಪೂರ್ಣಗೊಳ್ಳುವುದು’ ಎಂದು ಹೇಳಿದರು.
‘ಡ್ರೋನ್ ನಿರೋಧಕ ತಂತಜ್ಞಾನವನ್ನು ಡಿಆರ್‌ಡಿಒ ಹಾಗೂ ಇತರ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿವೆ’ ಎಂದೂ ಸಚಿವ ಶಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.