ನವದೆಹಲಿ (ಪಿಟಿಐ): ಪೊಲೀಸ್ ಇಲಾಖೆಯ ಬೃಹತ್ ಆಧುನೀಕರಣ ಯೋಜನೆಯನ್ನು ಐದು ವರ್ಷದವರೆಗೂ, ಅಂದರೆ 2025–26ರವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ ₹ 20,275 ಕೋಟಿ.
ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರ, ಮಾವೋವಾದಿ ಬಾಧಿತ ಈಶಾನ್ಯ ರಾಜ್ಯಗಳಲ್ಲಿ ಭದ್ರತೆಗೆ ಸಂಬಂಧಿತ ವೆಚ್ಚ, ಹೊಸ ಬೆಟಾಲಿಯನ್‌ಗಳ ಸ್ಥಾಪನೆ, ಅತ್ಯಾಧುನಿಕ ಪ್ರಯೋಗಾಲಯಗಳು, ತನಿಖಾ ವ್ಯವಸ್ಥೆಯನ್ನು ಸ್ಥಾಪಿಸುವ ಕಾರ್ಯಗಳು ಇದರಲ್ಲಿ ಸೇರಿವೆ.
ಗೃಹ ಸಚಿವ ಅಮಿತ್ ಶಾ ಅವರುಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆ, ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಸಂಬಂಧಿಸಿದ ಈ ಆಧುನೀಕರಣ ಯೋಜನೆಯನ್ನು 2021–22ರಿಂದ 2025–26ಕ್ಕೆ ವಿಸ್ತರಿಸಲು ಆಸಕ್ತಿ ವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಮುಂದುವರಿಸಲು ಅನುಮೋದನೆ ನೀಡಿತು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಪ್ರಯೋಗಾಲಯಗಳ ಸ್ಥಾಪನೆ, ಮಾದಕವಸ್ತು ನಿಯಂತ್ರಣ ಘಟಕ ಸ್ಥಾಪನೆಗೆ ರಾಜ್ಯಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಭದ್ರತೆಗೆ ₹ 18,839 ಕೋಟಿ ಅನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.