ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಶಂಕಿತ ಉಗ್ರ, ಬಂಧಿತ ಯಾಸಿನ್ ಮಲಿಕ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್ ) ಸಂಘಟನೆಯನ್ನು ಇನ್ನೂ ಐದು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಫ್ರೀಡಂ ಲೀಗ್ (ಜೆಕೆಪಿಎಲ್) ಮತ್ತು ಅದರ ನಾಲ್ಕು ಬಣಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರಲ್ಲಿ ಜೆಕೆಪಿಎಲ್ (ಮುಕ್ತಾರ್ ಅಹ್ಮದ್ ವಾಜಾ), ಜೆಕೆಪಿಎಲ್ (ಬಷೀರ್ ಅಹ್ಮದ್ ಅಹ್ಮದ್ ತೋತಾ), ಜೆಕೆಪಿಎಲ್ (ಗುಲಾಂ ಮೊಹಮ್ಮದ್ ಖಾನ್) ಮತ್ತು ಯಾಕೂಬ್ ಶೇಖ್ ನೇೃತ್ವದ ಜೆಕೆಪಿಎಲ್ (ಅಜೀಜ್ ಶೇಖ್) ಸಂಘಟನೆಗಳು ಒಳಗೊಂಡಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜೆಕೆಎಲ್‌ಎಫ್ ಹಾಗೂ ಜೆಕೆಪಿಎಲ್ ಉಗ್ರವಾದ ಮತ್ತು ಪ್ರತ್ಯೇಕತಾವಾದವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುವ ಯಾರೇ ಆದರೂ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ. ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರವು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.