ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿಯಲ್ಲಿ ದೇಶದ ನಕ್ಸಲ್ ಪೀಡಿತ ಜಿಲ್ಲೆಗಳ ಪ್ರಮಾಣ 70ರಷ್ಟು ಕಡಿಮೆಯಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ರಾಷ್ಟ್ರೀಯ ಬುಡಕಕಟ್ಟು ಸಂಶೋಧನಾ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ‘ಈಶಾನ್ಯ ಭಾಗಗಲ್ಲಿ ಶೇ 66ಕ್ಕಿಂತ ಹೆಚ್ಚು ಪ್ರದೇಶದ ವ್ಯಾಪ್ತಿಯಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಹಿಂಪಡೆಯಲಾಗಿದೆ. ಜೊತೆಗೆ ಆ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸಲಾಗಿದೆ’ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಸಂಶೋಧನೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಈ ಉದ್ದೇಶಕ್ಕಾಗಿ ಕೇವಲ ₹7 ಕೋಟಿ ಮೀಸಲಾಗಿಡಲಾಗಿತ್ತು. ಆದರೆ, ನಾವು ₹150 ಕೋಟಿ ತೆಗೆದಿರಿಸಿದ್ದೇವೆ. ಏಕಲವ್ಯ ವಸತಿ ಶಾಲೆಗಳ ಅನುದಾನವನ್ನು ₹278 ಕೋಟಿಯಿಂದ ₹1,418 ಕೋಟಿಗೆ ಹೆಚ್ಚಿಸಲಾಗಿದೆ. ಬುಡಕಟ್ಟು ಮಗು ಮಾತ್ರವೇ ಒಲಿಂಪಿಕ್ಸ್‌ನಲ್ಲಿ ಉತ್ತಮ ಪದಕ ತರಬಲ್ಲದು. ಅವರು ಸ್ವಾಭಾವಿಕ ಕ್ರೀಡಾ ವ್ಯಕ್ತಿಗಳಾಗಿದ್ದು, ಅವರಿಗೆ ಮಾರ್ಗದರ್ಶನ, ಅಭ್ಯಾಸ ಮತ್ತುತಮ್ಮ ಕೌಶಲ್ಯ ತೋರ್ಪಡಿಸಲು ವೇದಿಕೆ ಮಾತ್ರವೇ ಅಗತ್ಯವಿದೆ ಎಂದರು.
ನಕ್ಸಲ್ ಪೀಡಿತ ಪ್ರದೇಶಗಳು ಮತ್ತು ಈಶಾನ್ಯ ಭಾರತವು ಬುಡಕಟ್ಟು ಜನರೇ ಹೆಚ್ಚು ವಾಸಿಸುವ ಪ್ರದೇಶಗಳಾಗಿವೆ. ಭದ್ರತೆಯು ಅಭಿವೃದ್ಧಿಯ ತಳಪಾಯವಾಗಿತ್ತು. ಈಶಾನ್ಯ ಮತ್ತು ಕೇಂದ್ರೀಯ ಭಾರತದ ರಕ್ಷಣೆಯು ಬುಡಕಟ್ಟು ಜನರ ಅಭಿವೃದ್ಧಿಗೆ ನಾಂದಿ ಹಾಡಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದ 2006-2014ರ ಮಧ್ಯೆ ಈಶಾನ್ಯ ಭಾರತದಲ್ಲಿ 8,700 ಅಹಿತಕರ ಘಟನೆಗಳು ನಡೆದಿದ್ದವು. ಆದರೆ ಮೋದಿ ನೇತೃತ್ವದ ಸರ್ಕಾರದಲ್ಲಿ ಈ ಸಂಖ್ಯೆಯು 1,700ಕ್ಕೆ ಕುಸಿದಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 304 ಭದ್ರತಾ ಸಿಬ್ಬಂದಿ ಬಲಿಯಾಗಿದ್ದರು. ಆದರೆ ಮೋದಿ ಆಡಳಿತದಲ್ಲಿ ಕೇವಲ 87 ಯೋಧರು ಹುತಾತ್ಮರಾಗಿದ್ದಾರೆ. ನಾಗರಿಕರ ಸಾವಿನ ಸಂಖ್ಯೆಯು 1990ರಿಂದ 217ಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.