ADVERTISEMENT

ಮೋದಿ ಸರ್ಕಾರಕ್ಕೆ 7 ವರ್ಷ: ಬಿಜೆಪಿ ಸರ್ಕಾರ ದೇಶಕ್ಕೆ ಹಾನಿಕಾರಕ ಎಂದ ಕಾಂಗ್ರೆಸ್

ಪಿಟಿಐ
Published 30 ಮೇ 2021, 10:37 IST
Last Updated 30 ಮೇ 2021, 10:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾಗಿ ರಾಷ್ಟ್ರದ ಚುಕ್ಕಾಣಿ ಹಿಡಿದು ಇಂದಿಗೆ 7 ವರ್ಷ ಪೂರ್ಣಗೊಂಡಿದ್ದು, ಇದುವೇ ದೇಶಕ್ಕೆ ಹಾನಿಕಾರಕವಾಗಿದೆ. ಬಿಜೆಪಿ ಪ್ರತಿ ವಿಭಾಗದಲ್ಲಿಯೂ ವಿಫಲಗೊಂಡಿದೆ ಮತ್ತು ಜನರ ನಂಬಿಕೆಗೆ ದ್ರೋಹ ಬಗೆದಿದೆ ಎಂದು ಭಾನುವಾರ ಕಾಂಗ್ರೆಸ್ ಆರೋಪಿಸಿದೆ.

ಬಿಜೆಪಿಯ 'ಪ್ರಮಾದಗಳ'ನ್ನೊಳಗೊಂಡ ಏಳು ಅಂಶಗಳ ಚಾರ್ಜ್ ಶೀಟ್ ಅನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರವು ಇದಕ್ಕೆ ಬದ್ಧವಾಗಿದೆ ಮತ್ತು ಮೋದಿ ಆಡಳಿತವು ಜನರ ಬಗೆಗಿನ ತನ್ನ ಜವಾಬ್ದಾರಿಗಳನ್ನು ತ್ಯಜಿಸಿದೆ ಎಂದು ಆರೋಪಿಸಿದೆ.

ಕ್ಷೀಣಿಸುತ್ತಿರುವ ಆರ್ಥಿಕತೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರ ಹಾಗೂ ಕೋವಿಡ್-19 ದುರುಪಯೋಗ ಸೇರಿದಂತೆ ಸರ್ಕಾರದ ಪ್ರಮುಖ ವೈಫಲ್ಯಗಳನ್ನು ಕಾಂಗ್ರೆಸ್ ಪಟ್ಟಿ ಮಾಡಿದೆ.

ADVERTISEMENT

ಕೋವಿಡ್-19 ವಿರುದ್ಧ ಹೋರಾಡಲು ಸರಿಯಾದ ಬದ್ಧತೆ, ನೀತಿ ಮತ್ತು ನಿರ್ಣಯ ಕೈಗೊಳ್ಳುವ ಅಗತ್ಯವಿದೆ. ತಿಂಗಳಿಗೊಮ್ಮೆ ಅರ್ಥಹೀನ ಮಾತುಕತೆಯನ್ನಾಡುವ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಇಂದಿನ ಮನ್ ಕಿ ಬಾತ್‌ನ 77ನೇ ಕಂತಿನಲ್ಲಿ ಪ್ರಧಾನಿ ಮೋದಿ ಕೋವಿಡ್-19 ವಿರುದ್ಧದ ಹೋರಾಟ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಮಾತನಾಡಿ, 'ಕಳೆದ ಏಳು ವರ್ಷಗಳಿಂದಲೂ ಹಿಂದೆಂದೂ ಕಂಡಿಲ್ಲದ ವಿನಾಶ, ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಮತ್ತು ಭಾರತದ ಜನರನ್ನು ತ್ಯಜಿಸುವ ಕಥೆಯಾಗಿದೆ. ಈ ಸರ್ಕಾರವು ಜನರ ನಂಬಿಕೆಗೆ ದ್ರೋಹ ಬಗೆದ ಕಾರಣ ದೇಶಕ್ಕೆ ಹಾನಿಕಾರಕವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಜನರು ಇಟ್ಟಿರುವ ನಂಬಿಕೆ ಮತ್ತು ಸಹಜ ವಿಶ್ವಾಸಕ್ಕೆ ದ್ರೋಹ ಬಗೆದಿದೆ' ಎಂದು ಹೇಳಿದರು.

'ಅಸಂಖ್ಯಾತ ಭರವಸೆಗಳ ಆಧಾರದ ಮೇಲೆ ಜನರು ಆಯ್ಕೆ ಮಾಡಿದ ಸರ್ಕಾರವು 140 ಕೋಟಿ ಭಾರತೀಯರ ಮೇಲೆ ಮಾಡಿದ ಕೆಟ್ಟ ರೀತಿಯ ವಂಚನೆಯಾಗಿದೆ. ಏಳು ವರ್ಷಗಳ ನಂತರ ಸರ್ಕಾರದ ಸಾಧನೆಯನ್ನು ಪರಿಶೀಲಿಸುವ ಸಮಯ ಬಂದಿದೆ. ದೇಶವು ಏಕೆ ಬಳಲುತ್ತಿದೆ ಎಂದು ಕೇಳುವ ಸಮಯ ಬಂದಿದೆ' ಎಂದು ಅವರು ಹೇಳಿದರು.

ಕಳೆದ ಏಳು ವರ್ಷಗಳಲ್ಲಿ ಸರ್ಕಾರದ 'ವೈಫಲ್ಯಗಳನ್ನು' ಪಟ್ಟಿ ಮಾಡುವ ಕಾಂಗ್ರೆಸ್ 4.5 ನಿಮಿಷಗಳ ವಿಡಿಯೊ 'ಭಾರತ್ ಮಾತಾ ಕಿ ಕಹಾನಿ' ಯನ್ನು ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.