ADVERTISEMENT

ಮೋದಿ ಸರ್ಕಾರದಲ್ಲಿ ಉನ್ನತ ಐಎಎಸ್‌ ಅಧಿಕಾರಿಗಳ ಸ್ಥಾನ ಅಸ್ಥಿರ

ನಿರಂತರ ವರ್ಗಾವಣೆ ಕಾರಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2018, 9:45 IST
Last Updated 21 ಜುಲೈ 2018, 9:45 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉನ್ನತ ಮಟ್ಟದ ಐಎಎಸ್‌ ಅಧಿಕಾರಿಗಳ ಸ್ಥಾನವನ್ನು ಅಸ್ಥಿರಗೊಳಿಸಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.

ತಮ್ಮದು ಸುಸ್ಥಿರ ಸರ್ಕಾರ ಎಂಬುದಾಗಿ ಎನ್‌ಡಿಎ ಬಿಂಬಿಸುತ್ತಿದೆ. ಆದರೆ, ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳನ್ನು ನಿರಂತರವಾಗಿ ವರ್ಗಾವಣೆ ಮಾಡುತ್ತಿರುವುದರಿಂದ ಅಧಿಕಾರಿಗಳ ಪಾಲಿಗೆ ಇದೊಂದು ಅಸ್ಥಿರ ಸರ್ಕಾರವಾಗಿ ಪರಿಣಮಿಸಿದೆ ಎಂದು ದಿ ಪ್ರಿಂಟ್ ಜಾಲತಾಣ ವರದಿ ಮಾಡಿದೆ.

‘2014ರ ನಂತರ ಅಧಿಕಾರಿಗಳನ್ನು ನಿರಂತರವಾಗಿ ವಾರ್ಗಾವಣೆ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಸ್ಥಿರತೆ ಎಂಬುದೇ ಇಲ್ಲ. ಇದರ ಪರಿಣಾಮವಾಗಿ, ದೀರ್ಘಾವಧಿಯ ಬಗ್ಗೆ ಯಾರೂ ಯೋಚಿಸುತ್ತಲೇ ಇಲ್ಲ’ ಎಂದು ಹಣಕಾಸು ಇಲಾಖೆಯ ಮಾಜಿ ಕಾರ್ಯದರ್ಶಿ ಅರವಿಂದ್ ಮಾಯಾರಾಂ ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.

ನಾಲ್ಕು ವರ್ಷದಲ್ಲಿ ಐವರು ವರ್ಗ!

ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಐವರು ಕಾರ್ಯದರ್ಶಿಗಳನ್ನು ವರ್ಗಾವಣೆ ಮಾಡಲಾಗಿದೆ. ನಿವೃತ್ತರಾಗುತ್ತಿರುವ ಅನಿಲ್ ಸ್ವರೂಪ್ ಬದಲಿಗೆ ರಿನಾ ರಾಯ್ ಅವರನ್ನು ಇತ್ತೀಚೆಗೆ ನೇಮಕ ಮಾಡಲಾಗಿತ್ತು.

ನಿವೃತ್ತಿಯ ಅಂಚಿನಲ್ಲಿರುವವರನ್ನು ನೇಮಕ ಮಾಡುವುದು, ನಿರಂತರವಾಗಿ ಕಾರ್ಯದರ್ಶಿಗಳನ್ನು ಬದಲಾಯಿಸುತ್ತಿರುವುದು ವಿವಿಧ ಇಲಾಖೆಗಳಲ್ಲಿ ನಡೆಯುತ್ತಲೇ ಇದೆ ಎನ್ನಲಾಗಿದೆ.

ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಣತರಲ್ಲದ ಅಧಿಕಾರಿಗಳಿಂದ ಅಭಿವೃದ್ಧಿ ಹೇಗೆ ಸಾಧ್ಯ? ಕೆಲವೇ ತಿಂಗಳುಗಳಲ್ಲಿ ವರ್ಗಾವಣೆಯಾದರೆ ಅಂತಹ ಅಧಿಕಾರಿಗಳು ಆಯಾ ಇಲಾಖೆಗಳ ವಿಚಾರಗಳಲ್ಲಿ ತಜ್ಞರಾಗುವುದು ಹೇಗೆ ಸಾಧ್ಯ ಎಂಬ ಅನುಮಾನವನ್ನೂ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.

ಮುಖ್ಯ ಇಲಾಖೆಗಳೂ ಹೊರತಲ್ಲ
ಕಾರ್ಯದರ್ಶಿಗಳ ನಿರಂತರ ವರ್ಗಾವಣೆ ವಿಷಯದಲ್ಲಿ ಹಣಕಾಸು, ಗೃಹ, ಆರೋಗ್ಯವೇ ಮೊದಲಾದ ಪ್ರಮುಖ ಇಲಾಖೆಗಳೂ ಹೊರತಾಗಿಲ್ಲ.

ಒಂದು ಸಚಿವಾಲಯದಲ್ಲಿ ಎರಡು ವರ್ಷಗಳ ನಿಶ್ಚಿತ ಸೇವಾವಧಿ ಇದ್ದ ಹೊರತಾಗಿಯೂ ಮೋದಿ ಆಡಳಿತಾವಧಿಯಲ್ಲಿ ಹಣಕಾಸು ಇಲಾಖೆ ಐವರು ಕಾರ್ಯದರ್ಶಿಗಳನ್ನು ಕಂಡಿದೆ! ಗೃಹ ಇಲಾಖೆಯಲ್ಲಿ ನಾಲ್ಕು ವರ್ಷಗಳಲ್ಲಿ ನಾಲ್ವರು ಕಾರ್ಯದರ್ಶಿಗಳು ಕಾರ್ಯನಿರ್ವಹಿಸಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಇಲಾಖೆಯಲ್ಲಿಯೂ ಐವರು ಕಾರ್ಯದರ್ಶಿಗಳು ಕಾರ್ಯನಿರ್ವಹಿಸಿದ್ದಾರೆ. ಸಿಬ್ಬಂದಿ ತರಬೇತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೂ ನಾಲ್ಕು ವರ್ಷಗಳಲ್ಲಿ ಐವರು ಕಾರ್ಯದರ್ಶಿಗಳನ್ನು ಕಂಡಿದೆ.

ಎನ್‌ಡಿಎ ಸರ್ಕಾರದ ಅವಧಿಯಲ್ಲಿ ವರ್ಗಾವಣೆಗೊಂಡ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ವಿವರ



‘ತರ್ಕವಿಲ್ಲದ ನಡೆ’

ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ (ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ) 2013ರ ಆಗಸ್ಟ್‌ನಲ್ಲಿ ಸುಜಾತಾ ಸಿಂಗ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಅವರ ಅವಧಿ ಮುಗಿಯುವ ಒಂದು ವರ್ಷ ಮೊದಲೇ ಅವರನ್ನು ತೆರವುಗೊಳಿಸಲಾಗಿತ್ತು.

ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ವರು ಗೃಹ ಕಾರ್ಯದರ್ಶಿಗಳ ಪೈಕಿ ಅನಿಲ್ ಗೋಸ್ವಾಮಿ ಮತ್ತು ಎಲ್.ಸಿ.ಗೋಯಲ್ ಅವರನ್ನು ನಿವೃತ್ತಿಗೂ ಮೊದಲೇ ಸ್ಥಾನದಿಂದ ತೆರವುಗೊಳಿಸಲಾಗಿತ್ತು.

ಅಷ್ಟೇನೂ ಪ್ರಮುಖವಲ್ಲದ್ದು ಎಂದು ಪರಿಗಣಿಸಲಾಗಿರುವ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಗೆ ವರ್ಗಾವಣೆ ಮಾಡಿದ್ದನ್ನು ಮಾಯರಮ್‌ ಪ್ರಶ್ನಿಸಿದ್ದಾರೆ.

‘ಹಿಂದಿನ ಸರ್ಕಾರಗಳು ನೇಮಕ ಮಾಡಿರುವ ಅಧಿಕಾರಿಗಳನ್ನು ಬದಲಾಯಿಸುವುದೇನೋ ಸರಿ. ಆದರೆ, ತಾವೇ ನೇಮಕ ಮಾಡಿರುವ ಅಧಿಕಾರಿಗಳನ್ನು ನಿರಂತರ ಬದಲಾಯಿಸುತ್ತಿರುವುದರಲ್ಲಿ ಯಾವುದೇ ತರ್ಕವಿಲ್ಲ’ ಎಂದು ಮಾಯಾರಾಂ ಅಭಿಪ್ರಾಯಪಟ್ಟಿದ್ದಾರೆ.

ಯುಪಿಎ ಎರಡನೇ ಅವಧಿ ಸ್ವಲ್ಪ ಉತ್ತಮ

ಇಲಾಖೆಗಳ ಕಾರ್ಯದರ್ಶಿಗಳ ವರ್ಗಾವಣೆ ವಿಚಾರದಲ್ಲಿ ಯುಪಿಎ ಸರ್ಕಾರದ ಎರಡನೇ ಅವಧಿ ಸ್ವಲ್ಪ ಉತ್ತಮ ಎನ್ನಲಾಗಿದೆ. ಈ ಅವಧಿಯಲ್ಲಿ ಹಣಕಾಸು ಇಲಾಖೆಯಲ್ಲಿ ಆರು ಮಂದಿ ಕಾರ್ಯನಿರ್ವಹಿಸಿದ್ದರು. ಮಾಯರಮ್ ಅವರಿಗಿಂತ ಮೊದಲು ಕಾರ್ಯದರ್ಶಿಯಾಗಿದ್ದ ಸುಮಿತ್ ಬೋಸ್ ಕೇವಲ ನಾಲ್ಕು ತಿಂಗಳು ಕಾರ್ಯನಿರ್ವಹಿಸಿದ್ದರು. 2011ರಲ್ಲಿ ಸುಷ್ಮಾ ನಾಥ್ ಸಹ ನಾಲ್ಕೇ ತಿಂಗಳು ಕಾರ್ಯದರ್ಶಿಯಾಗಿದ್ದರು.

ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ವರ್ಗಾವಣೆಗೊಂಡ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ವಿವರ

ಯುಪಿಎ ಎರಡನೇ ಅವಧಿಯಲ್ಲಿ ಹೆಚ್ಚು ಕಾರ್ಯದರ್ಶಿಗಳು ತೆರವಾಗಿದ್ದರೆ, ನಿವೃತ್ತಿ ಅದಕ್ಕೆ ಕಾರಣವಾಗಿತ್ತೇ ವಿನಹ ವರ್ಗಾವಣೆಯಲ್ಲ ಎಂದು ಹೇಳಲಾಗಿದೆ.

ADVERTISEMENT

ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆಗಳಿಗೇ ಪ್ರಮುಖ ಹೊಡೆತ

ನಿರಂತರ ವರ್ಗಾವಣೆಯಿಂದ ದೀರ್ಘಾವಧಿಯ ಯೋಜನೆಗಳನ್ನು ಒಳಗೊಂಡಿರುವ ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆಗಳೇ ಹೆಚ್ಚು ಹೊಡೆತವಾಗಲಿದೆ ಎನ್ನಲಾಗಿದೆ.

ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಪೂರ್ಣಾವಧಿಗೆ ಒಬ್ಬರೇ ಸಚಿವರಿದ್ದರು. ಆದರೆ, ಸುಮಾರು ಆರು ಕಾರ್ಯದರ್ಶಿಗಳು ಬದಲಾಗಿದ್ದರು. ತಂಬಾಕು ಲಾಬಿ ಆರೋಪದಲ್ಲಿ 2014ರ ಫೆಬ್ರುವರಿಯಲ್ಲಿ ಕೇಶವ್ ದೇಸಿರಾಜು ಅವರನ್ನು ಸ್ಥಾನದಿಂದ ತೆರವುಗೊಳಿಸಲಾಗಿತ್ತು.

ಆರೋಗ್ಯ ಇಲಾಖೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ವರು ಕಾರ್ಯದರ್ಶಿಗಳನ್ನು ಬದಲಾಯಿಸಲಾಗಿದೆ. ಈ ಪೈಕಿ, ಲವ ವರ್ಮಾ ಮತ್ತು ಬಿ.ಪಿ.ಶರ್ಮಾ ಒಂದು ವರ್ಷವನ್ನೂ ಪೂರೈಸಿಲ್ಲ. ಇವರಿಬ್ಬರನ್ನೂ ಕ್ರಮವಾಗಿ ಸಾಮಾಜಿಕ ನ್ಯಾಯ ಮತ್ತು ಸಿಬ್ಬಂದಿ ತರಬೇತಿ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

‘ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆಗಳಲ್ಲಿ ತಕ್ಷಣಕ್ಕೆ ಫಲಿತಾಂಶ ಗೋಚರವಾಗದು. ಕಾರ್ಯದರ್ಶಿಗಳಿಗೆ ದೀರ್ಘ ಅವಧಿ ಬೇಕಾಗುತ್ತದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾಜಿ ಕಾರ್ಯದರ್ಶಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.