ನವದೆಹಲಿ: ‘ಯುವಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುವುದು ಮೋದಿ ಸರ್ಕಾರವು ಹೊಂದಿರುವ ಏಕೈಕ ಗುರಿ‘ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿರುದ್ಯೋಗ ಕುರಿತಂತೆ ಸಿಟಿ ಗ್ರೂಪ್ ಬಿಡುಗಡೆ ಮಾಡಿರುವ ವರದಿಯನ್ನು ಮೋದಿ ಸರ್ಕಾರ ನಿರಾಕರಿಸಬಹುದು. ಆದರೆ, ಅಂಕಿ ಅಂಶಗಳನ್ನು ಹೇಗೆ ನಿರಾಕರಿಸಲು ಸಾಧ್ಯ ಎಂದು ಅವರು ಎಕ್ಸ್ ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಅಸಂಖ್ಯಾತ ಯುವಜನರ ಉದ್ಯೋಗದ ಕನಸನ್ನು ಮೋದಿ ಸರ್ಕಾರ ನುಚ್ಚುನೂರು ಮಾಡಿದೆ ಎಂಬುದಂತೂ ಸತ್ಯ. ಇತ್ತೀಚಿನ ಅಂಕಿ ಅಂಶಗಳು ಈ ಕುರಿತಂತೆ ಸರ್ಕಾರದ ಪ್ರತಿಪಾದನೆಯನ್ನು ಅಲ್ಲಗಳೆಯುತ್ತವೆ ಎಂದೂ ಹೇಳಿದ್ದಾರೆ.
ಎನ್‌ಎಸ್‌ಎಸ್‌ಒ ವಾರ್ಷಿಕ ಸಮೀಕ್ಷೆಯ ಅನುಸಾರ, ಉತ್ಪಾದಕ ವಲಯದಲ್ಲಿ 2015 ರಿಂದ 2023ರ ವರೆಗಿನ ಏಳು ವರ್ಷಗಳಲ್ಲಿ 54 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.
‘2010–11ನೇ ಸಾಲಿನಲ್ಲಿ 10.8 ಕೋಟಿ ಜನರಿಗೆ ಕೃಷಿಯೇತರ, ಅಸಂಘಟಿತ ವಲಯದಲ್ಲಿ ಉದ್ಯೋಗ ದೊರೆತಿತ್ತು. 2022–23ನೇ ಸಾಲಿನಲ್ಲಿ ಈ ಸಂಖ್ಯೆಯು 10.96 ಕೋಟಿ ಇದೆ. ಅಂದರೆ 12 ವರ್ಷಗಳಲ್ಲಿ 16 ಲಕ್ಷ ಉದ್ಯೋಗಗಳಷ್ಟೇ ಹೆಚ್ಚಾಗಿದೆ’ ಎಂದು ಹೇಳಿದ್ದಾರೆ.
ನಗರ ಪ್ರದೇಶಗಳಲ್ಲಿನ ‘ನಿಗದಿತ ಅವಧಿಯಲ್ಲಿನ ಕಾರ್ಮಿಕರ ಪಡೆ’ ಕುರಿತ ಇತ್ತೀಚಿನ ವರದಿಯನ್ನು ಖರ್ಗೆ ಅವರು ಉಲ್ಲೇಖಿಸಿದ್ದಾರೆ. ಈ ವರದಿ ಪ್ರಕಾರ, ನಿರುದ್ಯೋಗ ಪ್ರಮಾಣವು 2024ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.7ರಷ್ಟಿತ್ತು. ಸರ್ಕಾರದ ಅಂಕಿ ಅಂಶಗಳನ್ನು ಆಧರಿಸಿ ಲಖನೌದ ಐಐಎಂ ಈ ವರದಿಯನ್ನು ರೂಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.