ಕೊಲ್ಲಂ: ಕಳೆದ ಎರಡು ತಿಂಗಳಿನಿಂದ ಇಡೀ ದೇಶ ಶಬರಿಮಲೆ ಬಗ್ಗೆ ಮಾತನಾಡುತ್ತಿದೆ. ಶಬರಿಮಲೆ ವಿಷಯದಲ್ಲಿ ಕೇರಳದ ಎಲ್‍ಡಿಎಫ್ ಸರ್ಕಾರ ನಡೆದುಕೊಂಡ ರೀತಿಯನ್ನು ಯಾರೂ ಮರೆಯುವುದಿಲ್ಲ.ಒಂದು ಸರ್ಕಾರ ಮತ್ತು ಒಂದು ಪಕ್ಷ ನಡೆದುಕೊಂಡಿರುವ ರೀತಿ ನಾಚಿಕೆಗೇಡಿನದ್ದು ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.ಕಮ್ಯೂನಿಸ್ಟ್ ಪಕ್ಷ ಭಾರತದ ಇತಿಹಾಸ, ಸಂಸ್ಕೃತಿ, ಆಧ್ಯಾತ್ಮವನ್ನು ಗೌರವಿಸುವುದಿಲ್ಲ ಎಂದು ನಮಗೆಲ್ಲರಿಗೂ ಗೊತ್ತಿದೆ ಎಂದಿದ್ದಾರೆ ಮೋದಿ.
ಕೇರಳದ ಕೊಲ್ಲಂ ಬೈಪಾಸ್ ಉದ್ಘಾಟನೆ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್‍ಡಿಎ ಸರ್ಕಾರ ಕೇರಳದ ಜನರಿಗಾಗಿ ಹಗಲು ರಾತ್ರಿ ದುಡಿಯುತ್ತಿದೆ.ಆದರೆ ಕೇರಳದ ಧಾರ್ಮಿಕತೆ, ಪ್ರಶಾಂತತೆ, ಸಾಮರಸ್ಯ ಮತ್ತು ಸಂತೋಷ ಎಲ್‍ಡಿಎಫ್ ಮತ್ತು ಯುಡಿಎಫ್‍ನ ಭ್ರಷ್ಟಾಚಾರ ಮತ್ತು ಕೋಮುವಾದದ ನಡುವೆ ನಲುಗಿ ಹೋಗಿರುವುದನ್ನು ನೋಡಿ ನನಗೆ ದುಃಖವಾಗುತ್ತಿದೆ.
ಎಡಪಕ್ಷಗಳು ಮತ್ತು ಕಾಂಗ್ರೆಸ್ ಲಿಂಗ ಸಮಾನತೆ ಮತ್ತು ಸಾಮಾಜಿಕ ಸಾಮಾನತೆಯನ್ನು ಗೌರವಿಸುತ್ತೇವೆ ಎಂದು ಹೇಳುತ್ತಿದ್ದರೂ ಅವರು ಅದಕ್ಕೆ ತದ್ವಿರುದ್ಧವಾಗಿದ್ದಾರೆ.ಎನ್‍ಡಿಎ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ದನಿಯೆತ್ತಿದರೆ ಅದನ್ನು ವಿರೋಧಿಸುತ್ತಿರುವವರು ಯಾರು ಗೊತ್ತಾ? ಕಾಂಗ್ರೆಸ್ ಮತ್ತು ಕಮ್ಯೂನಿಸ್ಟರು.ತ್ರಿವಳಿ ತಲಾಖ್ ಮಹಿಳೆಯರ ಪಾಲಿಗೆ ದೊಡ್ಡ ಅನ್ಯಾಯವಾಗಿದೆ.
ಎಲ್ಲ ಇಸ್ಲಾಮಿಕ್ ರಾಷ್ಟ್ರಗಳು ತ್ರಿವಳಿ ತಲಾಖ್‍ನ್ನು ನಿಷೇಧಿಸಿದೆ. ಆದರೆ ಭಾರತದಲ್ಲ ಇದು ಸಾಧ್ಯವಾಗಿಲ್ಲ. ಯಾಕೆಂದರೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ವೋಟ್ ಬ್ಯಾಂಕ್‍ಗಾಗಿ ಅದನ್ನು ಬೆಂಬಲಿಸುತ್ತಿವೆ. ಮಹಿಳೆಯರಿಗೆ ಅನ್ಯಾಯವಾಗುತ್ತಿರುವ ತ್ರಿವಳಿ ತಲಾಖ್ ಪದ್ದತಿಯನ್ನು ಎಲ್‍ಡಿಎಫ್ ಮತ್ತು ಯುಡಿಎಫ್ ಯಾಕೆ ಬೆಂಬಲಿಸುತ್ತಿದೆ? ಎಂದು ಕೇರಳದ ಜನರು ಪ್ರಶ್ನೆ ಕೇಳಬೇಕಾಗಿದೆ.
ಯುಡಿಎಫ್ ಮತ್ತು ಎಲ್‍ಡಿಎಫ್ ಎರಡು ಹೆಸರು ಆಗಿದ್ದರೂ, ಕೇರಳದ ಯುವ ಶಕ್ತಿಯನ್ನು ಕಡೆಗಣಿಸುವಲ್ಲಿ ಇವರಿಬ್ಬರೂ ಒಂದೇ ಆಗಿದ್ದಾರೆ. ಯುಡಿಎಫ್ ಮತ್ತು ಎಲ್‍ಡಿಎಫ್ ಎರಡು ಹೆಸರು ಆಗಿದ್ದರೂ, ಬಡವರನ್ನು ಇವರು ಕಡೆಗಣಿಸುತ್ತಾರೆ. ಯುಡಿಎಫ್ ಮತ್ತು ಎಲ್‍ಡಿಎಫ್ ಎರಡು ಹೆಸರು ಆಗಿದ್ದರೂ, ಕೇರಳದ ಜನರನ್ನು ಇವೆರಡೂ ಪಕ್ಷಗಳು ಮೋಸ ಮಾಡುತ್ತಿವೆ.
ಎಲ್‍ಡಿಎಫ್ ಮತ್ತು ಯುಡಿಎಫ್ ನಮ್ಮನ್ನು ನೋಡಿ ನಗುತ್ತಿವೆ.ಅವರಲ್ಲಿ ನಾನು ಹೇಳುತ್ತಿದ್ದೇನೆ, ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಬೇಡಿ. ನಿಮ್ಮ ಕುಹಕ, ನಿಮ್ಮ ದೊಣ್ಣೆ, ನಿಮ್ಮ ಅಹಿಂಸೆ ಬಿಜೆಪಿ ಕಾರ್ಯಕರ್ತರ ಮನೋಬಲವನ್ನು ಕುಗ್ಗಿಸುವುದಿಲ್ಲ ಎಂದು ಮೋದಿ ಗುಡುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.