ದರ್ಭಾಂಗ್: ‘ಜಂಗಲ್ ರಾಜ್ ಎಂದೇ ಕುಖ್ಯಾತಿ ಪಡೆದಿದ್ದ ಬಿಹಾರವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿವೃದ್ಧಿ ಪಥದತ್ತ ತರುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿದ್ದಾರೆ.
ಏಮ್ಸ್ ಸೇರಿದಂತೆ ದರ್ಭಾಂಗ್‌ನಲ್ಲಿ ₹12 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತಮ್ಮ 40 ನಿಮಿಷಗಳ ಭಾಷಣದಲ್ಲಿ ಮಿತ್ರ ಪಕ್ಷವಾದ ಜೆಡಿಯು ಮುಖ್ಯಸ್ಥ ನಿತೀಶ್ ಅವರನ್ನು ಹೊಗಳುವ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ಸರ್ಕಾರಗಳ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದರು.
ನಿತೀಶ್ ಅವರನ್ನು ‘ಲೋಕಪ್ರಿಯ ಮುಖ್ಯಮಂತ್ರಿ’ ಎಂದು ಬಣ್ಣಿಸಿದ ಪ್ರಧಾನಿ, 2024ರ ಲೋಕಸಭಾ ಚುನಾವಣೆ ನಂತರ ಉಂಟಾದ ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಮಿತ್ರ ಪಕ್ಷದ ನೆರವನ್ನು ನೆನೆದರು.
‘ನಿತೀಶ್ ಬಾಬು ಅವರು ಉತ್ತಮ ಆಡಳಿತ ತರುವ ಮೂಲಕ ಮಾದರಿಯನ್ನು ಹುಟ್ಟುಹಾಕಿದ್ದಾರೆ. ಆಧುನಿಕ ಬಿಹಾರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅವರನ್ನು ಎಷ್ಟು ಹೊಗಳಿದರೂ ಕಡಿಮೆ. ಇದೀಗ ಡಬಲ್ ಎಂಜಿನ್ ಸರ್ಕಾರವಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿವೆ’ ಎಂದರು.
‘2005ರಿಂದ 15 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್– ಆರ್‌ಜೆಡಿ ಸರ್ಕಾರಗಳು ಸುಳ್ಳು ಭರವಸೆಗಳ ಮೂಲಕ ರಾಜ್ಯವನ್ನು ಹಾಳು ಮಾಡಿದ್ದರು. ನಂತರ ಬಂದ ನಿತೀಶ್ ಸರ್ಕಾರವು ಇದನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.
‘ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಹೋಲಿಸಿದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಮಗ್ರ ವಿಧಾನದ ಮೂಲಕ ಕೆಲಸ ಮಾಡುತ್ತಿದೆ. ದೆಹಲಿಯಲ್ಲಿ ಏಮ್ಸ್ ಇರುವುದನ್ನು ಬಿಟ್ಟರೆ, ದೇಶದ ಇತರ ಭಾಗಗಳಲ್ಲಿ ಇರಲಿಲ್ಲ. ಆದರೆ, ಇಂದು ಭಾರತದಾದ್ಯಂತ ಡಜನ್‌ಗೂ ಹೆಚ್ಚು ಏಮ್ಸ್‌ಗಳಿವೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಆರೋಗ್ಯ ಸೌಲಭ್ಯ ನೀಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತಿವೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರು ಇದರ ಲಾಭ ಪಡೆಯುತ್ತಿದ್ದಾರೆ’ ಎಂದು ನರೇಂದ್ರ ಮೋದಿ ಹೇಳಿದರು.
ಬಿಹಾರದ ಉತ್ತರ ಭಾಗದಲ್ಲಿ ಹೆಚ್ಚು ಮಾತನಾಡುವ ಮೈಥಿಲಿ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವ ಹಾಗೂ ಪಾಲಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವ ಭರವಸೆಯನ್ನು ಪ್ರಧಾನಿ ನೀಡಿದರು.
‘ದರ್ಭಾಂಗ್‌ನಲ್ಲಿ ಏಮ್ಸ್ ಆಗುವುದರಿಂದ ಬಿಹಾರಕ್ಕೆ ಮಾತ್ರವಲ್ಲದೆ, ನೆರೆಯ ಪಶ್ಚಿಮ ಬಂಗಾಳ ಹಾಗೂ ನೇಪಾಳಕ್ಕೂ ಪ್ರಯೋಜನವಾಗಲಿದೆ’ ಎಂದರು.
ಇದಕ್ಕೂ ಮೊದಲು ಮಾತನಾಡಿದ ನಿತೀಶ್ ಕುಮಾರ್, ‘ದರ್ಭಾಂಗ್‌ನಲ್ಲಿ ಏಮ್ಸ್ ಮಂಜೂರು ಮಾಡಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು. ದಿ. ಅರುಣ್ ಜೇಟ್ಲಿ ಅವರ ಬಳಿ ಬಿಹಾರದ ಉತ್ತರ ಭಾಗಕ್ಕೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೋರಿಕೆ ಸಲ್ಲಿಸಿದ್ದೆ. ಅದು ಈಗ ಈಡೇರಿದೆ’ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಕೇಂದ್ರ ಸಚಿವರಾದ ಚಿರಾಗ್ ಪಾಸ್ವಾನ್ ಹಾಗೂ ನಿತ್ಯಾನಂದ ರಾಯ್, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹಾಗೂ ವಿಜಯ ಕುಮಾರ್ ಸಿನ್ಹಾ ಇದ್ದರು.
ಪ್ರಧಾನಿ ಭಾಷಣಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಮಾಧ್ಯಮ ವಿಭಾಗದ ಪ್ರೇಮ್ ಚಂದ್ರ ಮಿಶ್ರಾ, ‘ಬಿಹಾರದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಎಂಟು ವರ್ಷಗಳು ಬೇಕಾಯಿತು. ಆಸ್ಪತ್ರೆ ನಿರ್ಮಾಣವು ತ್ವರಿತಗತಿಯಲ್ಲಿ ಸಾಗಿ, ಕಾಲಮಿತಿಯೊಳಗೆ ಇದು ಕಾರ್ಯಾರಂಭ ಮಾಡಬೇಕಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.