ನವದೆಹಲಿ: ಚುನಾವಣಾ ಸಮಯದಲ್ಲಿ ಮಾದರಿ ನೀತಿ ಸಂಹಿತೆಯ ನಿರಂತರ ಉಲ್ಲಂಘನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆಯಾಚಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಗುರುವಾರ ಒತ್ತಾಯಿಸಿದೆ.
'ಕಾನೂನಿನ ಮುಂದೆ ಎಲ್ಲರೂ ಸಮಾನರು ಮತ್ತು ಮೋದಿ ಅವರು ಇದಕ್ಕೆ ಹೊರತಾಗಿಲ್ಲ'. ಹಾಗಾಗಿ ಈ ಅವಧಿಯಲ್ಲಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಕೆಎಂ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ನರೇಂದ್ರ ಮೋದಿ ಮತ್ತು ಬಿಜೆಪಿಯ ಹಲವು ಪ್ರಮುಖ ನಾಯಕರು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷವನ್ನು ಹರಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಚುನಾವಣಾ ಲಾಭಕ್ಕಾಗಿ ಸಾಮಾನ್ಯ ಜನರ ಧಾರ್ಮಿಕ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅದು ಆರೋಪಿಸಿದೆ.
ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯ:
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದರೂ ಅದು ಗಮನಹರಿಸಿಲ್ಲ. ಹಾಗಾಗಿ ಚುನಾವಣಾ ಅವಧಿಯಲ್ಲಿ ಆಗಿರುವ ಉಲ್ಲಂಘನೆಗಳನ್ನು ಗಮನಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಕೆಎಂ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದೆ.
ಅಲ್ಪಸಂಖ್ಯಾತರ ವಿರುದ್ಧ ನಿರಂತರವಾಗಿ ದ್ವೇಷವನ್ನು ಹುಟ್ಟುಹಾಕುವುದು ಅವರಲ್ಲಿ ಪರಕೀಯತೆ ಮತ್ತು ಅಭದ್ರತೆಯನ್ನು ಬೆಳೆಸುತ್ತದೆ. ಇದು ಮೂಲಭೂತವಾದಿ ಪ್ರವೃತ್ತಿಗಳನ್ನು ಹುಟ್ಟುಹಾಕುತ್ತದೆ ಮತ್ತು ಜಾತ್ಯತೀತ ಅಡಿಪಾಯಗಳನ್ನು ದುರ್ಬಲಗೊಳಿಸುತ್ತದೆ. ಜೊತೆಗೆ ಕೋಮುವಾದಕ್ಕೆ ಅವಕಾಶವನ್ನು ಕಲ್ಪಿಸುತ್ತದೆ ಎಂದು ಎಸ್‌ಕೆಎಂ ಪ್ರತಿಪಾದಿಸಿದೆ.
ಬಿಜೆಪಿಯ ವಿಭಜಕ ತಂತ್ರಗಳನ್ನು ತಿರಸ್ಕರಿಸುವ ಮೂಲಕ ಜನರು ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸಿದ್ದಾರೆ. 10 ವರ್ಷಗಳ ನಂತರ ಬಿಜೆಪಿ ಏಕಪಕ್ಷೀಯ ಬಹುಮತವನ್ನು ಕಳೆದುಕೊಂಡಿರುವುದು, ವಾರಾಣಸಿಯಲ್ಲಿ ನರೇಂದ್ರ ಮೋದಿ ಅವರು ಕಡಿಮೆ ಅಂತರದಲ್ಲಿ ಗೆದ್ದಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.