ನವದೆಹಲಿ: ‘ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ‘ಮಾನಸಿಕವಾಗಿ ಕುಗ್ಗಿದ’ ಹಾಗೂ ಮೈತ್ರಿ ಸರ್ಕಾರವನ್ನು ನಡೆಸಲು ಹೆಣಗಾಡುತ್ತಿರುವ ವ್ಯಕ್ತಿ’ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನೀಟ್ ಪರೀಕ್ಷಾ ಅಕ್ರಮ ಹಾಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ರದ್ದತಿ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವರೀಗ ಪೂರ್ಣ ಸಮರ್ಥರಲ್ಲ. ಅವರು ಕಾರ್ಯನಿರ್ವಹಿಸಲು ತುಂಬಾ ಕಷ್ಟಪಡುತ್ತಿದ್ದಾರೆ. ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಕುಸಿದಿದ್ದಾರೆ. ಸದ್ಯಕ್ಕೆ ಪ್ರಧಾನಿಯ ಮುಖ್ಯ ಕಾರ್ಯಸೂಚಿ ಸ್ಪೀಕರ್ ಹುದ್ದೆಯನ್ನು ತಮ್ಮ ಪಕ್ಷಕ್ಕೆ ಪಡೆಯುವುದಾಗಿದೆ. ಹಾಗಾಗಿ, ಅವರು ನೀಟ್ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಎಷ್ಟೇ ಕಷ್ಟಪಟ್ಟಾದರೂ ಸರ್ಕಾರ ನಡೆಸಲು ಹಾಗೂ ಸ್ಪೀಕರ್ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ಅವರು ಬಯಸುತ್ತಿದ್ದಾರೆ. ಅವರ ಮನಸ್ಸೆಲ್ಲ ಅದರತ್ತಲೇ ಕೆಂದ್ರೀಕೃತವಾಗಿದೆ‘ ಎಂದರು.
‘ಶಿಕ್ಷಣ ಸಂಸ್ಥೆಗಳು ಬಿಜೆಪಿ ಹಾಗೂ ಅದರ ಮಾತೃಸಂಸ್ಥೆ ಆರ್‌ಎಸ್‌ಎಸ್‌ನ ಕಬಂಧಬಾಹುವಿನಲ್ಲಿ ಸಿಲುಕಿರುವುದು ಪ್ರಶ್ನೆಪತ್ರಿಕೆ ಸೋರಿಕೆಗೆ ಪ್ರಮುಖ ಕಾರಣವಾಗಿದೆ. ಅರ್ಹತೆಯ ಆಧಾರದಲ್ಲಿ ಕುಲಪತಿಗಳ ನೇಮಕ ಆಗುತ್ತಿಲ್ಲ. ಸೈದ್ಧಾಂತಿಕ ಹಿನ್ನೆಲೆ ಹೊಂದಿರುವ ಅಸಮರ್ಥ ಕುಲಪತಿಗಳನ್ನು ನೇಮಿಸುವ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿದ್ದಾರೆ. ಸ್ವತಂತ್ರ ಹಾಗೂ ವಸ್ತುನಿಷ್ಠ ಶಿಕ್ಷಣ ವ್ಯವಸ್ಥೆಯನ್ನು ಕೆಡವಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ತನಕ ಪ್ರಶ್ನೆ ಪತ್ರಿಕೆ ಸೋರಿಕೆ ನಿಲ್ಲುವುದಿಲ್ಲ’ ಎಂದು ಅವರು ಹೇಳಿದರು. ’ಪ್ರಶ್ನೆ ಪತ್ರಿಕೆ ಸೋರಿಕೆಯು ದೇಶವಿರೋಧಿ ಚಟುವಟಿಕೆ. ಪರೀಕ್ಷೆಯ ವಿಷಯದಲ್ಲಿ ಪ್ರಧಾನಿ ನಿಷ್ಕ್ರಿಯರಾಗಿದ್ದಾರೆ’ ಎಂದು ಅವರು ಆರೋಪಿಸಿದರು.
‘ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ಯುವಜನರು ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಿಂದ ತಾವು ಅನುಭವಿಸಿದ ಕಷ್ಟಗಳ ಬಗಗೆ ಹೇಳಿಕೊಂಡಿದ್ದಾರೆ’ ಎಂದರು.
ಪ್ರಶ್ನೆಪತ್ರಿಕೆ ಸೋರಿಕೆ ವಿಷಯವನ್ನು ವಿರೋಧ ಪಕ್ಷಗಳು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಿವೆ ಎಂದು ಅವರು ತಿಳಿಸಿದರು.
‘ಸರ್ಕಾರವನ್ನು ನಡೆಸುವ ಮೋದಿಯವರ ಆಲೋಚನೆಯು ಭಯವನ್ನು ಹುಟ್ಟುಹಾಕುವುದು, ಜನರನ್ನು ಹೆದರಿಸುವುದು ಮತ್ತು ಜನರನ್ನು ಮಾತನಾಡದಂತೆ ಮಾಡುವುದಾಗಿದೆ. ಆದರೆ, ಈಗ ಜನರು ಅವರಿಗೆ ಹೆದರುವುದಿಲ್ಲ’ ಎಂದು ರಾಹುಲ್ ಹೇಳಿದರು.
‘ಮೊದಲು (ಮೋದಿಯವರ) ಎದೆಯ ಗಾತ್ರವು 56 ಇಂಚು ಆಗಿತ್ತು. ನಾನು ಈಗ ಸಂಖ್ಯೆಯನ್ನು ನೀಡಲು ಸಾಧ್ಯವಿಲ್ಲ. ಆದರೆ, ಅದು 30–32 ಆಯಿತು. ಮೊನ್ನೆ ವಾರಾಣಸಿಯಲ್ಲಿ ಯಾರೋ ಚಪ್ಪಲಿ (ಮೋದಿಯವರ ಕಾರಿನ ಮೇಲೆ) ಎಸೆದರು. ಈ ಚುನಾವಣೆಯಲ್ಲಿ ಮೋದಿಯವರ ಮೂಲಭೂತ ಪರಿಕಲ್ಪನೆಯನ್ನು ನಾಶಪಡಿಸಲಾಗಿದೆ. ಅವರಿಗೆ ಬಹಳ ಪ್ರಬಲವಾದ ವಿರೋಧವಿದೆ. ಆದ್ದರಿಂದ, ಇದು ಆಸಕ್ತಿದಾಯಕ ಸಮಯವಾಗಿದೆ’ ಎಂದು ಅವರು ವ್ಯಾಖ್ಯಾನಿಸಿದರು.
ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ‘ಚಪ್ಪಲಿ ಎಸೆದಿರುವುದು ಅತ್ಯಂತ ಖಂಡನೀಯ ಹಾಗೂ ಅವರ ಭದ್ರತೆಯಲ್ಲಿ ಗಂಭೀರ ಲೋಪವಾಗಿದೆ’ ಎಂದಿದ್ದಾರೆ.
‘ಸರ್ಕಾರದ ನೀತಿಗಳ ವಿರುದ್ಧ ನಮ್ಮ ಪ್ರತಿಭಟನೆಯನ್ನು ಗಾಂಧಿ ವಿಧಾನದಲ್ಲಿ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ದ್ವೇಷ ಹಾಗೂ ಹಿಂಸೆಗೆ ಜಾಗ ಇಲ್ಲ’ ಎಂದು ಅವರು ಹೇಳಿದ್ದಾರೆ.
ರಷ್ಯಾ–ಉಕ್ರೇನ್ ಯುದ್ಧ ತಡೆದವರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ನೀಟ್ ಪರೀಕ್ಷೆ ಅಕ್ರಮ ಮತ್ತು ಯುಜಿಸಿ–ನೆಟ್ ಪರೀಕ್ಷೆ ರದ್ದಾಗಿರುವುದರ ಕುರಿತಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
‘ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ–ಉಕ್ರೇನ್ ಮತ್ತು ಇಸ್ರೇಲ್–ಗಾಜಾ ಯುದ್ಧವನ್ನು ನಿಲ್ಲಿಸಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಅವರಿಗೆ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಅಥವಾ ಅವರು ಇಚ್ಛಿಸಲಿಲ್ಲವೇನೊ’ ಎಂದು ಲೇವಡಿ ಮಾಡಿದರು.
‘ಚುನಾವಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಾನಸಿಕವಾಗಿ ಕುಸಿದಿದ್ದು, ಸರ್ಕಾರ ನಡೆಸಲು ಹೆಣಗಾಡುತ್ತಿದ್ದಾರೆ’ ಎಂದರು.
ವ್ಯಾಪಂ(ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಲ್) ಹಗರಣವನ್ನು ಉಲ್ಲೇಖಸಿ ಮಾತನಾಡಿದ ಅವರು, ಇದೀಗ ದೇಶದಾದ್ಯಂತ ವ್ಯಾಪಂ ಕಲ್ಪನೆಯನ್ನು ವಿಸ್ತರಿಸಲಾಗುತ್ತಿದೆ ಎಂದರು.
ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಸಂಸತ್ತಿನಲ್ಲಿ ಚರ್ಚಿಸಲಾಗುವುದು ಎಂದು ಇದೇ ವೇಳೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.