ಅಹಮದಾಬಾದ್: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಧಿಸಿರುವ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಎರಡು ವರ್ಷ ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್ ಅವರು ಈ ತೀರ್ಪಿನಿಂದ ಮತ್ತೆ ಹಿನ್ನಡೆ ಅನುಭವಿಸುವಂತಾಗಿದೆ.
ಈಗಾಗಲೇ ವಿಚಾರಣೆಯನ್ನು ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿದ ನ್ಯಾಯಮೂರ್ತಿ ಹೇಮಂತ್ ಪ್ರಚ್ಛಕ್ ಅವರಿದ್ದ ಏಕಸದಸ್ಯ ಪೀಠ, ‘ಸೂಕ್ತ ನೆಲೆಯಲ್ಲಿ ಅರ್ಜಿದಾರರು ಶಿಕ್ಷೆಗೆ ತಡೆ ಕೋರಿಲ್ಲ. ವಿಶೇಷ ಪ್ರಕರಣಗಳಲ್ಲಿ ಶಿಕ್ಷೆಗೆ ತಡೆ ನೀಡಲು ಸಾಧ್ಯವಿಲ್ಲ. ಅನರ್ಹತೆ ಎಂಬುದು ಸಂಸದರು ಮತ್ತು ಶಾಸಕರಿಗಷ್ಟೇ ಸೀಮಿತವಲ್ಲ. ರಾಹುಲ್ ವಿರುದ್ಧ 10 ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಬಾಕಿಯಿದೆ. ಸೂರತ್ ಕೋರ್ಟ್ ವಿಧಿಸಿರುವ ಶಿಕ್ಷೆಯು ನ್ಯಾಯೋಚಿತವಾಗಿದೆ’ ಎನ್ನುವ ಮೂಲಕ ಸೂರತ್ ಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿಯಿತು.
ಪುಣೆ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಸಲ್ಲಿಸಿರುವ ಮಾನನಷ್ಟ ಪ್ರಕರಣವನ್ನೂ ಆದೇಶ ಪ್ರಕಟಿಸುವ ವೇಳೆ ಉಲ್ಲೇಖಿಸಿತು.
ಪ್ರಕರಣದ ಹಿನ್ನೆಲೆ?: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಎಚ್. ಮುನಿಯಪ್ಪ ಪರ ಪ್ರಚಾರಕ್ಕಾಗಿ ರಾಹುಲ್ ಅವರು 2019ರ ಏಪ್ರಿಲ್ 13ರಂದು ಕೋಲಾರ ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾಷಣ ಮಾಡಿದ್ದರು. ಜನಸ್ತೋಮ ಉದ್ದೇಶಿಸಿ ಮಾತನಾಡುತ್ತಾ, ‘ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ’ ಎಂದು ಪ್ರಶ್ನಿಸಿದ್ದರು.
ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ‘ಮೋದಿ’ ಉಪನಾಮದ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಸೂರತ್ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯವು ಕಳೆದ ಮಾರ್ಚ್ 23ರಂದು ಶಿಕ್ಷೆ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸೂರತ್ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿಯೂ ಅವರಿಗೆ ಹಿನ್ನಡೆಯಾಗಿತ್ತು.
ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯೂ ಈಗ ವಜಾಗೊಂಡಿದೆ. ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆ ನೀಡಿದರಷ್ಟೇ ಅವರು ಸಂಸತ್ ಸದಸ್ಯರಾಗಿ ಮುಂದುವರಿಯಲಿದ್ದಾರೆ.
‘ನರೇಂದ್ರ ಮೋದಿ ಕುರಿತು ಈ ಹೇಳಿಕೆ ನೀಡಿದ್ದೇನೆ. ಅವರಿಗೆ ನೋವಾಗಿದ್ದರೆ ಅವರಷ್ಟೇ ಮೊಕದ್ದಮೆ ಹೂಡಬಹುದು. ಅದರ ಬದಲಾಗಿ ಪೂರ್ಣೇಶ್ ಮೋದಿ ಅವರಿಗೆ ಪ್ರಕರಣ ದಾಖಲಿಸಲು ಯಾವುದೇ ಹಕ್ಕಿಲ್ಲ’ ಎಂದು ನ್ಯಾಯಾಲಯದಲ್ಲಿ ರಾಹುಲ್ ವಾದಿಸಿದ್ದರು.
ಇದನ್ನೂ ಓದಿ: ಮೋದಿ ಉಪನಾಮ ಟೀಕೆ: ರಾಹುಲ್ ಗಾಂಧಿಗೆ 2 ವರ್ಷ ಜೈಲು
‘ಸುಪ್ರೀಂ’ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧಾರ
ನವದೆಹಲಿ: ‘ಗುಜರಾತ್ ಹೈಕೋರ್ಟ್‌ನ ತೀರ್ಪು ತೀವ್ರ ನಿರಾಸೆ ತಂದಿದ್ದು, ಇದನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ಶೀಘ್ರವೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ತೀರ್ಪು ಪ್ರಕಟಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ‘ನಾವು ಈ ರೀತಿಯ ತೀರ್ಪು ನಿರೀಕ್ಷಿಸಿರಲಿಲ್ಲ. ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಈಗಾಗಲೇ ಹೊರಬಿದ್ದಿರುವ ಯಾವುದೇ ಪ್ರಕರಣಗಳ ದೃಷ್ಟಾಂತವನ್ನೂ ತನ್ನ ತೀರ್ಪಿನಲ್ಲಿ ಹೈಕೋರ್ಟ್ ಉಲ್ಲೇಖಿಸಿಲ್ಲ’ ಎಂದರು.
ಮೋದಿ ಸರ್ಕಾರವು ರಾಹುಲ್ ಅವರ ಧ್ವನಿ ಅಡಗಿಸಲು ಹೊಸ ತಂತ್ರ ಹೆಣೆಯುತ್ತಿದೆ. ಅವರ ಹೋರಾಟವನ್ನು ತಡೆಯಲಾಗದೆ ತಡಬಡಾಯಿಸುತ್ತಿದೆ. ರಾಹುಲ್ ಹೇಳಿಕೆಯು ‘ಮೋದಿ’ ಎಂಬ ಉಪನಾಮದ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಮಾನಹಾನಿ, ಹಗೆತನ ಹೇಗೆ ಸೃಷ್ಟಿಸುತ್ತದೆ ಅಥವಾ ತೇಜೋವಧೆ ಮಾಡುತ್ತಿದೆ ಎಂಬ ಪ್ರಶ್ನೆಗಳಿಗೂ ಹೈಕೋರ್ಟ್ ಉತ್ತರಿಸಿಲ್ಲ’ ಎಂದು ಹೇಳಿದರು.
ಸಾವರ್ಕರ್ ಮೊಮ್ಮಗ ಕೂಡ ಮಾನನಷ್ಟ ಮೊಕದ್ದಮೆ ಹೂಡಿರುವ ಕುರಿತು ತೀರ್ಪಿನಲ್ಲಿ ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಕರಣ ದಾಖಲಾದ ಒಂದು ತಿಂಗಳ ಬಳಿಕ ಸೂರತ್ ನ್ಯಾಯಾಲಯ ತೀರ್ಪು ನೀಡಿದೆ. ಅದು ಹೇಗೆ ಈ ತೀರ್ಪಿಗೆ ನೇರವಾಗಿ ಸಂಬಂಧಪಡುತ್ತದೆ’ ಎಂದು ಪ್ರಶ್ನಿಸಿದರು. ‘ದಾಖಲಾಗಿರುವ ಯಾವುದೇ ಪ್ರಕರಣಗಳಲ್ಲಿ ರಾಹುಲ್‌ಗೆ ಶಿಕ್ಷೆಯಾಗಿಲ್ಲ. ಪ್ರಧಾನಿ ಮೋದಿಗೆ ಅಪಮಾನವಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ, ಆ ಪಕ್ಷದ ಹಿರಿಯ ನಾಯಕರು ಏಕೆ ಮೊಕದ್ದಮೆ ಹೂಡಿಲ್ಲ’ ಎಂದು ಪ್ರಶ್ನಿಸಿದರು.
ಮಾನನಷ್ಟ ತಡೆ ಕಾನೂನುಗಳ ದುರುಪಯೋಗವಾಗುತ್ತಿದೆ. ಆದರೆ, ನ್ಯಾಯಾಂಗ ವ್ಯವಸ್ಥೆ ಮತ್ತು ಸುಪ್ರೀಂ ಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ ಎಂದರು.
ರಾಜಕೀಯ ಹುನ್ನಾರಕ್ಕೆ ಹೆದರಲ್ಲ: ಖರ್ಗೆ
‘ಬಿಜೆಪಿ ರಾಜಕೀಯ ಪಿತೂರಿಗೆ ಕಾಂಗ್ರೆಸ್ ನಾಯಕರು ಅಥವಾ ಕಾರ್ಯಕರ್ತರು ಭಯಪಡುವುದಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಹುಲ್ ಅವರನ್ನು ಸಂಸತ್‌ನಿಂದ ಅನರ್ಹಗೊಳಿಸಲು ಬಿಜೆಪಿಯು ಸುಳ್ಳಿನ ಕಥೆಗಳನ್ನು ಹೆಣೆದು ಪಿತೂರಿ ನಡೆಸಿದೆ. ಅವರು ಸತ್ಯಕ್ಕಾಗಿ ಹೋರಾಡುತ್ತಿದ್ದಾರೆ. ಹಾಗಾಗಿ, ಬಿಜೆಪಿಯು ಈ ಸಂಚು ರೂಪಿಸಿದೆ. ಇದಕ್ಕೆ ಅವರು ಎದೆಗುಂದುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
‘ಮುಂದಿನ ದಿನಗಳಲ್ಲೂ ಸತ್ಯಕ್ಕಾಗಿ ಅವರ ಹೋರಾಟ ಮುಂದುವರಿಯಲಿದೆ. ಮೋದಿ ಸರ್ಕಾರದ ಮೇಲ್ವಿಚಾರಣೆಯಲ್ಲಿಯೇ ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ, ಜತಿನ್ ಮೆಹ್ತಾ ಅವರು ಸಾರ್ವಜನಿಕರ ಹಣ ದೋಚಿಕೊಂಡು ದೇಶ ತೊರೆದಿದ್ದಾರೆ. ಇದು ಸತ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.
‘ಬಿಜೆಪಿಯ ಅಧಿಕಾರಾವಧಿಯಲ್ಲಿ ಭ್ರಷ್ಟರು ದೇಶದಿಂದ ಓಡಿಹೋಗಿದ್ದಾರೆ. ಇದಕ್ಕೆ ಬಿಜೆಪಿಯೇ ಬೆಂಬಲ ನೀಡಿದೆ. ಅಧಿಕಾರ ಹಿಡಿದ ಮೋದಿ ಸರ್ಕಾರವು ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಅವರೆಲ್ಲರ ಭ್ರಷ್ಟಾಚಾರವನ್ನೂ ಸ್ಬಚ್ಛಗೊಳಿಸಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಮೋದಿಯ ದ್ವಿಮುಖ ನೀತಿ ಬಗ್ಗೆ ಜನರಿಗೆ ಅರಿವಿದೆ. ಷಡ್ಯಂತ್ರಕ್ಕೆ ನಾವು ಭಯಪಡುವುದಿಲ್ಲ. ಕಾನೂನಿನ ನೆಲೆಗಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ.–ಜೈರಾಮ್ ರಮೇಶ್, ಪ್ರಧಾನ ಕಾರ್ಯದರ್ಶಿ (ಸಂವಹನ), ಎಐಸಿಸಿ
‘ಹೈಕೋರ್ಟ್ ತೀರ್ಪಿನ ಅಧ್ಯಯನದ ಬಳಿಕ ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸುತ್ತೇವೆ.–ಕೆ.ಸಿ. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಎಐಸಿಸಿ
ಸತ್ಯ ಮತ್ತು ಜನರ ಹಿತಾಸಕ್ತಿ ರಕ್ಷಣೆಗೆ ರಾಹುಲ್ ಹೋರಾಡುತ್ತಿದ್ದಾರೆ. ಇದರ ತಡೆಗೆ ಕೇಂದ್ರದ ದುರಾಡಳಿತ ಮುಂದಾಗಿದೆ. ಆದರೆ, ಹೋರಾಟ ನಿಲ್ಲುವುದಿಲ್ಲ.– ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ನಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.