ADVERTISEMENT

ಅಂಬಾನಿ–ಅದಾನಿಗಾಗಿ ಮೋದಿ ಕೆಲಸ: ರಾಹುಲ್ ಗಾಂಧಿ

ಪಿಟಿಐ
Published 14 ಮೇ 2024, 2:59 IST
Last Updated 14 ಮೇ 2024, 2:59 IST
   

ರಾಯ್‌ಬರೇಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಂಬಾನಿ–ಅದಾನಿ ಹಿತಾಸಕ್ತಿ ಕಾಪಾಡುವುದಕ್ಕಾಗಿ ಕೆಲಸ ಮಾಡಿದರೆ, ತಮ್ಮ ಕುಟುಂಬವು ಸದಾ ರಾಯ್‌ಬರೇಲಿಯ ಜನರಿಗಾಗಿ ಕೆಲಸ ಮಾಡಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದರು.

ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಜತೆಗೆ ತಮ್ಮ ಅಜ್ಜಿ ಇಂದಿರಾ, ತಂದೆ ರಾಜೀವ್ ಮತ್ತು ತಾಯಿ ಸೋನಿಯಾ ಅವರು ಕ್ಷೇತ್ರದ ಜನರ ಜೀವನ ಉತ್ತಮ ಪಡಿಸಲು ಕೆಲಸ ಮಾಡಿದರು ಎಂದು ಪ್ರತಿಪಾದಿಸಿದರು.

ದೇಶದ ಅತಿ ದೊಡ್ಡ 22–25 ಉದ್ಯಮಿಗಳ ₹16 ಲಕ್ಷ ಕೋಟಿ ಸಾಲವನ್ನು ಮೋದಿ ಮನ್ನಾ ಮಾಡಿದರು ಎಂದು ಆರೋಪಿಸಿದ ರಾಹುಲ್, ಅದು 24 ವರ್ಷಗಳ ನರೇಗಾ ವೆಚ್ಚಕ್ಕೆ ಸಮನಾದ ಮೊತ್ತ ಎಂದು ವಿವರಿಸಿದರು. ‘ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದರೆ ಸಣ್ಣ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಮಹಿಳೆಯರ ಜೀವನ ಪರಿವರ್ತನೆ: ಸೋನಿಯಾ

ನವದೆಹಲಿ: ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಕಷ್ಟ ಕಾಲದಲ್ಲಿ ಮಹಿಳೆಯರ ಪರಿಸ್ಥಿತಿಯನ್ನು ಉತ್ತಮಪಡಿಸಲಿವೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಹೇಳಿದರು.

ಪಕ್ಷವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊ ಸಂದೇಶದಲ್ಲಿ ಮಹಿಳೆಯರ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಪ್ರೀತಿಯ ಸೋದರಿಯರೇ, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತದ ನಿರ್ಮಾಣದವರೆಗೆ, ಮಹಿಳೆಯರ ಕೊಡುಗೆ ಹಿರಿದಾಗಿದೆ. ಆದಾಗ್ಯೂ, ತೀವ್ರ ಹಣದುಬ್ಬರದಿಂದ ನಮ್ಮ ಮಹಿಳೆಯರು ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಅವರ ಕಠಿಣ ಶ್ರಮಕ್ಕೆ ನ್ಯಾಯ ಸಲ್ಲಿಸಲು ಕಾಂಗ್ರೆಸ್ ಪಕ್ಷವು ಕ್ರಾಂತಿಕಾರಕ ಗ್ಯಾರಂಟಿಯನ್ನು ಘೋಷಿಸಿದೆ. ಅದರಂತೆ ಪಕ್ಷವು ದೇಶದ ಪ್ರತಿ ಬಡ ಕುಟುಂಬದ ಮಹಿಳೆಗೆ ವಾರ್ಷಿಕವಾಗಿ ₹1 ಲಕ್ಷ ನೀಡಲಿದೆ’ ಎಂದು ಹೇಳಿದರು.

ಸೋನಿಯಾ ಅವರ ವಿಡಿಯೊ ಹಂಚಿಕೊಂಡಿರುವ ರಾಹುಲ್, ‘ಕಾಂಗ್ರೆಸ್‌ಗೆ ಮತ ನೀಡಿ, ನಿಮ್ಮ ಜೀವನ ಬದಲಿಸಿಕೊಳ್ಳಿ’ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಮದುವೆ: ರಾಹುಲ್
ರಾಯ್‌ಬರೇಲಿಯಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರಿಗೆ ಒಂದು ಮಾಮೂಲಿ ಪ್ರಶ್ನೆ ಎದುರಾಯಿತು. ಅದು ‘ನೀವು ಯಾವಾಗ ಮದುವೆಯಾಗುತ್ತೀರಿ’ ಎನ್ನುವುದು. ಅದಕ್ಕೆ ರಾಹುಲ್ ‘ಶೀಘ್ರದಲ್ಲೇ’ ಎಂದು ಉತ್ತರಿಸಿದರು. ತಂಗಿ ಪ್ರಿಯಾಂಕಾ ಅವರನ್ನು ವೇದಿಕೆಗೆ ಆಹ್ವಾನಿಸುವ ಮೂಲಕ ರಾಹುಲ್ ತಮ್ಮ ಮಾತು ಅಂತ್ಯಗೊಳಿಸಿದರು. ರಾಹುಲ್ ತಂಗಿಯ ಭುಜದ ಮೇಲೆ ಕೈ ಇಟ್ಟು, ಆತ್ಮೀಯವಾಗಿ ಅವರ ಕೆನ್ನೆ ಮುಟ್ಟಿ ಮೆಚ್ಚುಗೆ ಸೂಚಿಸಿದರು. ‘ಚುನಾವಣೆಯಲ್ಲಿ ನಾನು ದೇಶದ ವಿವಿಧ ಭಾಗಗಳನ್ನು ಸುತ್ತುತ್ತಿದ್ದೇನೆ. ನನ್ನ ತಂಗಿ ಇಲ್ಲಿ ಶ್ರಮಿಸುತ್ತಿದ್ದಾಳೆ. ಅದಕ್ಕಾಗಿ ಅವಳಿಗೆ ದೊಡ್ಡ ಧನ್ಯವಾದ’ ಎಂದು ಹೇಳಿದರು. ಆಗ ಪ್ರಿಯಾಂಕಾ, ಜನ ಕೇಳಿದ ಪ್ರಶ್ನೆಗೆ ಮೊದಲು ಉತ್ತರ ಹೇಳು ಎಂದು ಅಣ್ಣನಿಗೆ ಸೂಚಿಸಿದರು. ಆಗ ರಾಹುಲ್, ಕೆಲ ಹೊತ್ತು ಪ್ರಶ್ನೆ ಏನು ಎನ್ನುವುದನ್ನು ಕಂಡುಕೊಳ್ಳಲು ತಡಕಾಡಿ, ನಂತರ ಅದು ತನ್ನ ಮದುವೆಗೆ ಸಂಬಂಧಿಸಿದ್ದು ಎನ್ನುವುದು ಅರಿವಾಗಿ, ‘ಶೀಘ್ರದಲ್ಲೇ ಆಗುತ್ತೇನೆ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.