ಕಜಾನ್: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸರಿಸುಮಾರು ಐದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಭಾರತ ಮತ್ತು ಚೀನಾ ದೇಶಗಳು ಪ್ರಬುದ್ಧವಾಗಿ ವರ್ತಿಸಿ, ಪರಸ್ಪರರ ಬಗ್ಗೆ ಗೌರವ ತೋರುವ ಮೂಲಕ ಶಾಂತಿಯುತ ಹಾಗೂ ಸ್ಥಿರ ಸಂಬಂಧವನ್ನು ಹೊಂದಬಹುದು ಎಂಬ ವಿಚಾರವಾಗಿ ಇಬ್ಬರೂ ನಾಯಕರು ಸಹಮತ ವ್ಯಕ್ತಪಡಿಸಿದರು.
ಲಡಾಖ್‌ನ ಗಡಿ ವಿವಾದ ಪರಿಹರಿಸುವುದಕ್ಕೆ ಸಂಬಂಧಿಸಿದ ಒಪ್ಪಂದವನ್ನು ಇಬ್ಬರೂ ಅನುಮೋದಿಸಿದರು. ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಅವರು, ಗಡಿ ವಿಚಾರ ಕುರಿತ ಭಿನ್ನಾಭಿಪ್ರಾಯಗಳು ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನು ಹಾಳುಗೆಡವಲು ಅವಕಾಶ ಕೊಡಬಾರದು ಎಂಬುದನ್ನು ಒತ್ತಿಹೇಳಿದರು.
ಭಾರತ ಮತ್ತು ಚೀನಾದ ಗಡಿಗೆ ಸಂಬಂಧಿಸಿದ ವಿಶೇಷ ಪ್ರತಿನಿಧಿಗಳು ವಿವಾದ ಪರಿಹರಿಸುವಲ್ಲಿ ಹಾಗೂ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ ಎಂದು ಇಬ್ಬರೂ ನಾಯಕರು ಹೇಳಿದರು.
ವಿಶೇಷ ಪ್ರತಿನಿಧಿಗಳು ಬೇಗನೆ ಸಭೆ ನಡೆಸಿ, ತಮ್ಮ ಪ್ರಯತ್ನವನ್ನು ಮುಂದುವರಿಸಬೇಕು ಎಂದು ಮೋದಿ ಹಾಗೂ ಷಿ ಅವರು ಸೂಚನೆ ನೀಡಿದರು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
‘ವಿಶೇಷ ಪ್ರತಿನಿಧಿಗಳ ಮುಂದಿನ ಸಭೆಯನ್ನು ಸೂಕ್ತ ದಿನಾಂಕಕ್ಕೆ ನಿಗದಿ ಮಾಡುವ ಭರವಸೆ ಇದೆ’ ಎಂದರು.
ಭಾರತ ಮತ್ತು ಚೀನಾ ನಡುವಿನ ಸಂಬಂಧವು ಸ್ಥಿರವಾಗಿದ್ದರೆ ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿಯ ಮೇಲೆ ಪೂರಕವಾದ ಪರಿಣಾಮ ಉಂಟಾಗುತ್ತದೆ ಎಂಬ ಅಭಿಪ್ರಾಯವನ್ನು ಇಬ್ಬರೂ ನಾಯಕರು ವ್ಯಕ್ತಪಡಿಸಿದರು ಎಂದು ಮಿಸ್ರಿ ತಿಳಿಸಿದರು.
ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದ ನೆಲಸಿದಾಗ, ಸಂಬಂಧಗಳು ಸಹಜವಾಗುವುದಕ್ಕೆ ಅನುವು ಮಾಡಿಕೊಟ್ಟಂತೆ ಆಗುತ್ತದೆ ಎಂದು ಮಿಸ್ರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.