ADVERTISEMENT

ಭಾರತ–ಚೀನಾ ಬಾಂಧವ್ಯದ ಹೊಸ ಯುಗಾರಂಭ: ಪ್ರಧಾನಿ ಮೋದಿ

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜತೆ ದ್ವಿಪಕ್ಷೀಯ ಮಾತುಕತೆ * ಕಾಶ್ಮೀರ ವಿಚಾರ ಚರ್ಚೆ ಇಲ್ಲ

ಏಜೆನ್ಸೀಸ್
Published 12 ಅಕ್ಟೋಬರ್ 2019, 10:12 IST
Last Updated 12 ಅಕ್ಟೋಬರ್ 2019, 10:12 IST
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ   

ಚೆನ್ನೈ:ಚೆನ್ನೈ ಮೂಲಕ ಭಾರತ–ಚೀನಾ ನಡುವಣ ಬಾಂಧವ್ಯದ ಹೊಸ ಯುಗ ಆರಂಭಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತಮಿಳುನಾಡಿನ ಮಾಮಲ್ಲಪುರಂನಲ್ಲಿ ಚೀನಾ ಅಧ್ಯಕ್ಷಷಿ ಜಿನ್‌ಪಿಂಗ್ ಮತ್ತು ಮೋದಿ ಮಧ್ಯೆ ಮಾತುಕತೆ ನಡೆಯುತ್ತಿದೆ.

‘ನಮ್ಮ ನಡುವಣ ಭಿನ್ನಾಭಿಪ್ರಾಯಗಳನ್ನು ವಿವಾದವಾಗಲು ಬಿಡದೆ, ವಿವೇಚನೆಯೊಂದಿಗೆ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದೇವೆ. ಕಳೆದ 2,000 ವರ್ಷಗಳಲ್ಲಿ ಹೆಚ್ಚು ಬಾರಿ ಜಾಗತಿಕ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಭಾರತ–ಚೀನಾ ಆ ನಿಟ್ಟಿನಲ್ಲಿ ಮತ್ತೆ ಹಳಿಗೆ ಮರಳುತ್ತಿವೆ’ ಎಂದು ಮೋದಿ ಹೇಳಿದರು.

ಕಾಶ್ಮೀರ ವಿಚಾರ ಚರ್ಚೆ ಇಲ್ಲ:ಕಾಶ್ಮೀರ ವಿಚಾರದ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿಲ್ಲ. ಕಾಶ್ಮೀರವು ನಮ್ಮ ಆಂತರಿಕ ವಿಚಾರ ಎಂಬ ನಿಲುವಿಗೆ ಬದ್ಧರಾಗಿದ್ದೇವೆ ಎಂದು ವಿದೇಶಾಂಗ ಕಾರ್ಯದರ್ಶಿವಿಜಯ್ ಗೋಖಲೆ ತಿಳಿಸಿದ್ದಾರೆ. ವಾಣಿಜ್ಯ, ರಕ್ಷಣಾ ಸಹಕಾರ, ಭಯೋತ್ಪಾದನೆ ನಿರ್ಮೂಲನೆ ವಿಚಾರವಾಗಿ ಷಿ–ಮೋದಿ ಮಾತುಕತೆ ನಡೆಸಿದ್ದಾರೆ. ಹವಾಮಾನ ಬದಲಾವಣೆ ಕುರಿತೂ ಮಾತುಕತೆ ನಡೆದಿದೆ. ಷಿ ಅವರು ಮಾತುಕತೆ ವೇಳೆ ರಕ್ಷಣಾ ಸಹಕಾರ ವಿಚಾರಕ್ಕೆ ಸಂಬಂಧಿಸಿ ಹೆಚ್ಚು ಒತ್ತು ನೀಡಿದ್ದಾರೆ ಎಂದು ಗೋಖಲೆ ಹೇಳಿದ್ದಾರೆ.

ಮೋದಿಗೆ ಆಹ್ವಾನ ನೀಡಿದ ಷಿ:ಮುಂದಿನ ಶೃಂಗಸಭೆಗೆ ಚೀನಾಕ್ಕೆ ಬರಬೇಕು ಎಂದು ಮೋದಿಗೆ ಷಿ ಜಿನ್‌ಪಿಂಗ್ ಆಹ್ವಾನ ನೀಡಿದ್ದಾರೆ. ಇದನ್ನು ಮೋದಿ ಮನ್ನಿಸಿದ್ದಾರೆ ಎಂದೂ ಗೋಖಲೆ ತಿಳಿಸಿದ್ದಾರೆ.

ತಮಿಳುನಾಡಿಗೆ ವಿಶೇಷ ಧನ್ಯವಾದ:ಚೀನಾ ಅಧ್ಯಕ್ಷರ ಜತೆಗಿನ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ತಮಿಳುನಾಡಿನ ಜನರಿಗೆ ಮತ್ತು ಸರ್ಕಾರಕ್ಕೆ ಮೋದಿ ಧನ್ಯವಾದ ಸಮರ್ಪಿಸಿದ್ದಾರೆ.

‘ತಮಿಳುನಾಡಿನ ನನ್ನ ಸಹೋದರ ಸಹೋದರಿಯರಿಗೆ ವಿಶೇಷ ಧನ್ಯವಾದಗಳು. ಎಂದಿನಂತೆಯೇ ಅವರ ಆತಿಥ್ಯ ಉತ್ತಮವಾಗಿತ್ತು. ರಾಜ್ಯದ ಸೃಜನಶೀಲ ಜನರ ನಡುವೆ ಇರುವುದು ಯಾವತ್ತೂ ಸಂತೋಷದ ವಿಚಾರ.ಮಾಮಲ್ಲಪುರಂನಲ್ಲಿ ಶೃಂಗಸಭೆ ಆಯೋಜಿಸಿದ್ದಕ್ಕೆ ತಮಿಳುನಾಡು ಸರ್ಕಾರಕ್ಕೂ ಧನ್ಯವಾದಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.