ನವದೆಹಲಿ: 2021-22ನೇ ಹಣಕಾಸು ಸಾಲಿನ ಕೇಂದ್ರ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶ ಕಾಯುವ ಯೋಧರಿಗೆ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಗಡಿಯಲ್ಲಿ ಚೀನಾದ ಆಕ್ರಮಣವನ್ನು ಎದುರಿಸುತ್ತಿರುವ ಯೋಧರ ಪರಿಸ್ಥಿತಿ ಸುಧಾರಿಸಲು ಏನನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಉದ್ಯಮ/ಬಂಡವಾಳಶಾಹಿ ಮಿತ್ರರನ್ನು ಕೇಂದ್ರಿಕರಿಸಿದ ಬಜೆಟ್‌ನಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಚೀನಾದ ಆಕ್ರಮಣವನ್ನು ಎದುರಿಸುತ್ತಿರುವ ಯೋಧರಿಗೆ ಯಾವುದೇ ಬೆಂಬಲ ದೊರಕಿಲ್ಲ. ದೇಶ ಕಾಯುವ ಯೋಧರಿಗೆ ದ್ರೋಹ ಬಗೆಯಲಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು.
ನರೇಂದ್ರ ಮೋದಿ ಬಜೆಟ್‌ನಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ (ಎಂಎಸ್‌ಎಂಇ) ವಲಯದಕೆಲಸಗಾರರಿಗೂ ದ್ರೋಹ ಬಗೆಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅತಿ ಹೆಚ್ಚು ತೊಂದರೆಗೊಳಗಾಗಿರುವ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ವಲಯದವರಿಗೆ ಕಡಿಮೆ ಬಡ್ಡಿಯ ಸಾಲವನ್ನು ನೀಡಲಾಗಿಲ್ಲ. ಜಿಎಸ್‌ಟಿ ನೆರವನ್ನು ನೀಡಲಾಗಿಲ್ಲ ಎಂದು ಆರೋಪಿಸಿದರು.
ಈ ಮೊದಲು ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಜನರ ಕೈಗಳಿಗೆ ಹಣವನ್ನು ತಲುಪಿಸುವುದನ್ನು ಮರೆತುಬಿಡಿ. ನರೇಂದ್ರ ಮೋದಿ ಸರ್ಕಾರ ಭಾರತದ ಸಂಪತ್ತನ್ನು ಬಂಡವಾಳಶಾಹಿ ಉದ್ಯಮ ಮಿತ್ರರಿಗೆ ಹಸ್ತಾಂತರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.