ನವದೆಹಲಿ: ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬಹುದು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಗಳು 'ಜುಮ್ಲಾ' (ಸುಳ್ಳು) ಆಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ನಿರುದ್ಯೋಗ ಹಾಗೂ ಹಣದುಬ್ಬರ ದೇಶ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳಾಗಿದ್ದು, ಅದಕ್ಕೆ ಮೋದಿ ಸರ್ಕಾರದಿಂದ ಯಾವುದೇ ಪರಿಹಾರವಿಲ್ಲ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಸ್ರೇಲ್‌ಗೆ ಕಾರ್ಮಿಕರನ್ನು ಕಳುಹಿಸಲು ನಡೆಯುತ್ತಿದ್ದ ನೇಮಕಾತಿ ವಿಡಿಯೊ ಹಂಚಿರುವ ಅವರು, ಎಲ್ಲಿಯಾದರೂ ಯುದ್ಧ ನಡೆದರೆ ನಾವು ನಮ್ಮ ನಾಗರಿಕರನ್ನು ಅಲ್ಲಿಂದ ರಕ್ಷಿಸಿ ದೇಶಕ್ಕೆ ಕರೆ ತರುತ್ತೇವೆ. ಆದರೆ ನಿರುದ್ಯೋಗದಂತಹ ಪರಿಸ್ಥಿತಿಯಿಂದಾಗಿ ದೇಶದ ಯುವಕರು ಯುದ್ಧಪೀಡಿತ ಇಸ್ರೇಲ್‌ಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ರಕ್ಷಣೆಗಾಗಿ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
'ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ', 'ವರ್ಷದಲ್ಲಿ ಎರಡು ಕೋಟಿ ಉದ್ಯೋಗ', 'ಮೋದಿ ಗ್ಯಾರಂಟಿ' - ಚುನಾವಣೆ ವೇಳೆ ನಡೆಸಿದ್ದ ಈ ಎಲ್ಲ ಭರವಸೆಗಳು ಜುಮ್ಲಾ ಆಗಿದೆ ಎಂದು ಅವರು ಹೇಳಿದ್ದಾರೆ.
ಯುವಜನತೆಗೆ ನಮ್ಮದೇ ದೇಶದಲ್ಲಿ ಉದ್ಯೋಗ ಸಿಗುತ್ತಿಲ್ಲ. ಯುದ್ಧಪೀಡಿತ ಇಸ್ರೇಲ್‌ಗೆ ಯುವಕರನ್ನು ಕಳುಹಿಸಲು ಯಾವ ಆಧಾರದಲ್ಲಿ ಅನುಮತಿ ನೀಡಲಾಗಿದೆ? ಯುವಕರ ಜೀವನದ ರಕ್ಷಣೆಯ ಜವಾಬ್ದಾರಿಯನ್ನು ಯಾರು ಹೊರುತ್ತಾರೆ? ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.