ADVERTISEMENT

ಹೈದರಾಬಾದ್ ಕ್ರಿಕೆಟ್‌ ಸಂಸ್ಥೆಯಲ್ಲಿ ಅವ್ಯವಹಾರ: ED ವಿಚಾರಣೆಗೆ ಅಜರುದ್ದೀನ್ ಗೈರು

ಪಿಟಿಐ
Published 3 ಅಕ್ಟೋಬರ್ 2024, 13:38 IST
Last Updated 3 ಅಕ್ಟೋಬರ್ 2024, 13:38 IST
ಮೊಹಮ್ಮದ್‌ ಅಜರುದ್ದೀನ್‌
ಮೊಹಮ್ಮದ್‌ ಅಜರುದ್ದೀನ್‌   

ಹೈದರಾಬಾದ್‌: ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ಅಜರುದ್ದೀನ್‌ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಗುರುವಾರ ಹಾಜರಾಗಲಿಲ್ಲ.

ಅಕ್ಟೋಬರ್‌ 3ರಂದು ಹಾಜರಾಗುವಂತೆ ಅಜರುದ್ದೀನ್‌ ಅವರಿಗೆ ಇ.ಡಿ ನೋಟಿಸ್‌ ನೀಡಿತ್ತು. ‘ನನಗೆ ತನಿಖೆಗೆ ಹಾಜರಾಗಲು ಇನ್ನಷ್ಟು ಸಮಯ ಬೇಕು’ ಎಂದು ಅಜರುದ್ದೀನ್‌ ಅವರು ತನಿಖಾ ಸಂಸ್ಥೆಗೆ ಮನವಿ ಮಾಡಿದರು. ಆದ್ದರಿಂದ ಅಕ್ಟೋಬರ್‌ 8ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಜರುದ್ದೀನ್‌ ಅವರಿಗೆ ನೋಟಿಸ್‌ ನೀಡಿದೆ.

ಅಜರುದ್ದೀನ್‌ ಅವರು ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎನ್ನುವ ಆರೋಪದಲ್ಲಿ, ಕಳೆದ ವರ್ಷದ ನವೆಂಬರ್‌ನಲ್ಲಿ ತನಿಖಾ ಸಂಸ್ಥೆಯು ಕ್ರಿಕೆಟ್‌ ಸಂಸ್ಥೆ ಕಚೇರಿಯ ಮೇಲೆ ದಾಳಿ ನಡೆಸಿತ್ತು.

ADVERTISEMENT

ಉಪ್ಪಲ್‌ನಲ್ಲಿರುವ ರಾಜೀವ್‌ ಗಾಂಧಿ ಕ್ರಿಕೆಟ್‌ ಸ್ಟೇಡಿಯಂನ ಕೆನೊ‍‍ಪಿ ನಿರ್ಮಾಣ, ಕ್ರೀಡಾಂಗಣದಲ್ಲಿನ ಅಗ್ನಿಶಾಮಕ ವ್ಯವಸ್ಥೆ ಹಾಗೂ ಡೀಸೆಲ್‌ ಜನರೇಟರ್‌ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಇ.ಡಿ. ಚಾರ್ಚ್‌ಶೀಟ್‌ನಲ್ಲಿ ಹೇಳಿತ್ತು. ವೆಚ್ಚ ಹೆಚ್ಚಿಸುವ ಸಲುವಾಗಿಯೇ ನಿಧಾನಗತಿಯಲ್ಲಿ ನಿರ್ಮಾಣ ಕಾರ್ಯ ನಡೆಸಲಾಗಿದೆ ಎಂದೂ ತನಿಖಾ ಸಂಸ್ಥೆ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.