ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಭಾರತದಲ್ಲಿ ಇದ್ದಾಗಲೇ ಸಂಸತ್ ಅವರ ಲಾಗಿನ್ ಮತ್ತು ಪಾಸ್‌ವರ್ಡ್ ದುಬೈನಲ್ಲಿ ಬಳಕೆಯಾಗಿದೆ. ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರವೇ (ಎನ್ಐಸಿ) ತನಿಖಾ ಸಂಸ್ಥೆಗಳಿಗೆ ಈ ಮಾಹಿತಿ ನೀಡಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಶನಿವಾರ ಹೊಸ ಆರೋಪ ಮಾಡಿದ್ದಾರೆ.
‘ಈ ಸಂಸದೆ ಹಣಕ್ಕಾಗಿ ಈ ದೇಶದ ಭದ್ರತೆಯನ್ನೇ ಒತ್ತೆ ಇಟ್ಟಿದ್ದಾರೆ’ ಎಂದೂ ಅವರು ‘ಎಕ್ಸ್’ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
‘ಸಂಸದೆ ಭಾರತದಲ್ಲಿ ಇದ್ದಾಗಲೇ ಅವರ ಸಂಸತ್ ಐಡಿಯನ್ನು ದುಬೈನಲ್ಲಿ ಬಳಕೆ ಮಾಡಲಾಗಿದೆ. ಪ್ರಧಾನಿ, ಹಣಕಾಸು ಸಚಿವರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಸೇರಿದಂತೆ ಇಡೀ ಸರ್ಕಾರವೇ ಎನ್ಐಸಿಯನ್ನು ಬಳಕೆ ಮಾಡುತ್ತದೆ. ಟಿಎಂಸಿ ಮತ್ತು ವಿರೋಧ ಪಕ್ಷಗಳು ಈಗಲೂ ರಾಜಕೀಯ ಮಾಡುತ್ತವೆಯೇ? ಜನರೇ ನಿರ್ಧರಿಸುತ್ತಾರೆ’ ಎಂದು ಮಹುವಾ ಮತ್ತು ತನಿಖಾ ಸಂಸ್ಥೆಯ ಹೆಸರು ಉಲ್ಲೇಖಿಸದೇ ದೂರಿದ್ದಾರೆ.
ಅದಾನಿ ಸಮೂಹ ಮತ್ತು ಪ್ರಧಾನಿ ಮೋದಿ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮಹುವಾ ಅವರು ಹಣ, ಉಡುಗೊರೆ ಪಡೆದಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೇ ದುಬೆ ಈ ಗಂಭೀರ ಆರೋಪ ಮಾಡಿದ್ದಾರೆ.
ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಪ್ರತಿಯೊಬ್ಬ ಸಂಸದರಿಗೂ ಸಂಸತ್ತಿನಲ್ಲಿ ಮಾತನಾಡುವ ಹಕ್ಕು ಇದೆ. ಆಡಳಿತಾರೂಢ ಪಕ್ಷ ಸಂಸತ್ತಿನ ಒಳಗೆ ಮತ್ತು ಹೊರಗೆ ಧ್ವನಿಯನ್ನು ಹತ್ತಿಕ್ಕಲು ಬಯಸಿದೆ ಮತ್ತು ಈ ಮೂಲಕ ನಿರ್ದಿಷ್ಟ ಕೈಗಾರಿಕೋದ್ಯಮಿಗಳನ್ನು ರಕ್ಷಿಸಲು ಯತ್ನಿಸುತ್ತಿದೆಅಧೀರ್ ರಂಜನ್ ಚೌದರಿ, ಕಾಂಗ್ರೆಸ್ ನಾಯಕ
‘ಕಾಸಿಗಾಗಿ ಪ್ರಶ್ನೆ’ ಪ್ರಕರಣದ ಕುರಿತು ಲೋಕಸಭೆಯ ನೀತಿ–ನಿಯಮಗಳ ಸಮಿತಿಯು ತನಿಖೆ ನಡೆಸುತ್ತಿದ್ದು, ಅ.26ರಂದು ವಿಚಾರಣೆಗೆ ಹಾಜರಾಗುವಂತೆ ದುಬೆ ಅವರಿಗೆ ಸೂಚಿಸಿದೆ.
ಈ ನಡುವೆ ಮಹುವಾ ಅವರ ಸಂಸತ್ ಲಾಗಿನ್ ಮತ್ತು ಪಾಸ್‌ವರ್ಡ್ ಬಳಕೆ ಮಾಡಿರುವುದಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರು ತನಿಖಾ ಸಮಿತಿಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
‘ಸಂಸತ್ ಐಡಿ ಬಳಸಿಕೊಂಡಿದ್ದಕ್ಕೆ ಪ್ರತಿಯಾಗಿ ದುಬಾರಿ ಬೆಲೆಯ ಐಷಾರಾಮಿ ವಸ್ತುಗಳು, ದೆಹಲಿಯಲ್ಲಿ ತಮಗೆ ನೀಡಿರುವ ಬಂಗಲೆಯ ನವೀಕರಣ ಮತ್ತು ಪ್ರವಾಸದ ಖರ್ಚುವೆಚ್ಚ ಇತ್ಯಾದಿ ನೋಡಿಕೊಳ್ಳುವಂತೆ ಮಹುವಾ ಬೇಡಿಕೆ ಇಟ್ಟಿದ್ದರು’ ಎಂದೂ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಮಹುವಾ ವಜಾಗೊಳಿಸಲು ಬಿಜೆಪಿ ಒತ್ತಾಯ
ಮಹುವಾ ಮೊಯಿತ್ರಾ ತಾವಾಗಿಯೇ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಟಿಎಂಸಿ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಅವರು ವಜಾಗೊಳಿಸಬೇಕು ಎಂದು ಬಿಜೆಪಿ ಶುಕ್ರವಾರ ಒತ್ತಾಯಿಸಿದೆ. ‘ಮಹುವಾ ಸಂಸದೀಯ ವ್ಯವಸ್ಥೆಯೊಂದಿಗೆ ಸಂಪೂರ್ಣ ರಾಜಿಯಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ. ‘ಪ್ರಕರಣದತ್ತ ಗಮನ ನೀಡಬೇಕು. ಸಂಸದೆ ವಿರುದ್ಧ ಅಗತ್ಯ ಕ್ರಮ ಜರುಗಿಸಬೇಕು’ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಸಂಸದ ನಿಶಿಕಾಂತ್ ದುಬೆ ಮನವಿ ಮಾಡಿದ್ದಾರೆ. ಟಿಎಂಸಿ ಈ ವಿಷಯವಾಗಿ ಮೌನ ವಹಿಸಿದೆ. ಮಹುವಾ ವಿರುದ್ಧದ ಆರೋಪ ಅಲ್ಲಗಳೆದಿರುವ ಪಕ್ಷವು ಅದಾನಿ ಸಮೂಹ ಮತ್ತು ದುಬೆ ವಿರುದ್ಧ ಟೀಕೆ ಮುಂದುವರಿಸಿದೆ.
ಹಿರಾನಂದನಿ ಅಫಿಡವಿಟ್ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ
ಹಿರಾನಂದನಿ ಸಮೂಹದ ಸಿಇಒ ದರ್ಶನ್ ಹಿರಾನಂದನಿ ಅವರು ತನಿಖಾ ಸಮಿತಿಗೆ ಸಲ್ಲಿಸಿರುವ ಅಫಿಡವಿಟ್‌ನ ವಿಶ್ವಾಸಾರ್ಹತೆಯನ್ನು ಸಂಸದೆ ಮಹುವಾ ಮೊಯಿತ್ರಾ ಪಶ್ನಿಸಿದ್ದಾರೆ. ಪ್ರಧಾನಿ ಕಾರ್ಯಾಲಯವೇ (ಪಿಎಂಒ) ಅಫಿಡವಿಟ್ ಸಿದ್ಧಪಡಿಸಿ ಕುಟುಂಬದ ಉದ್ಯಮವನ್ನು ಮುಚ್ಚುವ ಬೆದರಿಕೆಯೊಡ್ಡಿ ಒತ್ತಾಯಪೂರ್ವಕವಾಗಿ ಅವರಿಂದ ಸಹಿ ಪಡೆದಿದೆ ಎಂದು ಅವರು ಆರೋಪಿಸಿದ್ದಾರೆ. ‘ದರ್ಶನ್ ಮತ್ತು ಅವರ ತಂದೆಗೆ ಬೆದರಿಕೆವೊಡ್ಡಲಾಗಿದೆ. ಸಹಿ ಹಾಕಲು ಅವರಿಗೆ 20 ನಿಮಿಷ ಗಡುವು ನೀಡಲಾಗಿತ್ತು’ ಗುರುವಾರ ತಡರಾತ್ರಿ ಹೇಳಿಕೆಯಲ್ಲಿ ಹೇಳಿದ್ದಾರೆ. ‘ಅಫಿಡವಿಟ್ ಸಲ್ಲಿಕೆಗೂ ಮೂರು ದಿನ ಮುನ್ನ ಹಿರಾನಂದನಿ ಸಮೂಹವು ಎಲ್ಲಾ ಆರೋಪಗಳು ಆಧಾರರಹಿತ ಎಂದು ಹೇಳಿತ್ತು. ‘ಅಫಿಡವಿಟ್’ ಬಿಡುಗಡೆಯಾಗಿದೆ. ಇದರಲ್ಲಿ ಯಾವುದೇ ಲೆಟರ್‌ಹೆಡ್ ಇಲ್ಲ. ತಲೆಗೆ ಪಿಸ್ತೂಲು ಗುರಿ ಇಡದ ಹೊರತಾಗಿ ಭಾರತದ ಗೌರವಾನ್ವಿತ ಉದ್ಯಮಿಯೊಬ್ಬರು ಬಿಳಿ ಹಾಳೆ ಮೇಲೆ ಸಹಿ ಹಾಕಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದ್ದಾರೆ. ಹಿರಾನಂದನಿ ಅವರು ಪತ್ರಿಕಾಗೋಷ್ಠಿ ಕರೆದು ಅಥವಾ ‘ಎಕ್ಸ್’ನಲ್ಲಿ ಪ್ರಕಟಿಸುವ ಮೂಲಕ ಏಕೆ ವಿಷಯ ತಿಳಿಸಲಿಲ್ಲ. ತನಿಖಾ ಸಂಸ್ಥೆಗಳಾಗಲೀ ನೀತಿ–ನಿಯಮ ಸಮಿತಿಯಾಗಲೀ ಏಕೆ ಈವರೆಗೂ ಅವರಿಗೆ ಸಮನ್ಸ್ ನೀಡಿಲ್ಲ ’ ಎಂದೂ ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.