ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಜುಹುವಿನಲ್ಲಿರುವ ಮನೆಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿರುವ ಜಾರಿ ನಿರ್ದೇಶನಾಲಯ (ED) ಕ್ರಮದ ವಿರುದ್ಧ ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಪ್ರಕರಣದ ಅರ್ಜಿಯ ವಿಚಾರಣೆಯನ್ನು ನ್ಯಾ. ರೇವತಿ ಮೋಹಿತೆ ಡೇರೆ ಹಾಗೂ ನ್ಯಾ. ಪೃಥ್ವಿರಾಜ್ ಚವಾಣ್ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಅರ್ಜಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಯಿತು.
ಬಿಟ್‌ಕಾಯಿನ್ ವಂಚನೆ ಪ್ರಕರಣದಲ್ಲಿ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಸೆ. 27ರಂದು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾಗೆ ನೋಟಿಸ್ ನೀಡಿದ್ದು, ಜುಹು ಮನೆಯನ್ನು ಹಾಗೂ ಪುಣೆಯಲ್ಲಿರುವ ತೋಟದ ಮನೆಯನ್ನು ಹತ್ತು ದಿನಗಳ ಒಳಗಾಗಿ ತೆರವುಗೊಳಿಸುವಂತೆ ಸೂಚಿಸಿತ್ತು.
‘ಶಿಲ್ಪಾ ಹಾಗೂ ರಾಜ್ ದಂಪತಿ ಹಾಗೂ ಅವರ ಕುಟುಂಬದ ಆರು ಸದಸ್ಯರು ಈ ಮನೆಯಲ್ಲಿ ಕಳೆದ 20 ವರ್ಷಗಳಿಂದ ವಾಸವಿದ್ದಾರೆ. ಅ. 3ರಂದು ಇವರಿಗೆ ನೋಟಿಸ್ ತಲುಪಿದೆ. ನೋಟಿಸ್ ಕಾನೂನುಬಾಹಿರವಾಗಿದ್ದು, ಅದನ್ನು ರದ್ದುಪಡಿಸಬೇಕು. ಆದರೆ, ಮನೆ ತೆರವುಗೊಳಿಸುವ ಯಾವುದೇ ಜರೂರು ಇಲ್ಲ. ಮಾನವೀಯ ದೃಷ್ಟಿಯಿಂದ ಅರ್ಜಿದಾರರು ಪರಿಹಾರವನ್ನೂ ಕೋರಿದ್ದಾರೆ’ ಎಂದು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಪರ ವಕೀಲ ಪ್ರಶಾಂತ್ ಪಾಟೀಲ್ ಮನವಿ ಮಾಡಿದರು.
‘ಬಿಟ್‌ಕಾಯಿನ್ ವಂಚನೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 2018ರಲ್ಲಿ ಅಮಿತ್ ಭಾರದ್ವಾಜ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಆದರೆ ಇದರಲ್ಲಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರ ಹೆಸರನ್ನು ಇ.ಡಿ. ಉಲ್ಲೇಖಿಸಿರಲಿಲ್ಲ. ಆದರೆ ನಂತರ ಕುಂದ್ರಾ ಅವರಿಗೆ ನೋಟಿಸ್ ಜಾರಿ ಮಾಡಲಾಯಿತು. ವಿಚಾರಣೆಗೆ ಕರೆದಾಗಲೆಲ್ಲಾ ಅವರು ಹಾಜರಾಗಿದ್ದಾರೆ’ ಎಂದು ವಿಭಾಗೀಯ ಪೀಠದ ಗಮನಕ್ಕೆ ತಂದರು.
‘2024ರ ಏಪ್ರಿಲ್‌ನಲ್ಲಿ ಜಾರಿ ನಿರ್ದೇಶನಾಲಯವು ನೋಟಿಸ್ ಜಾರಿ ಮಾಡಿ, ಮನೆಯನ್ನು ವಶಕ್ಕೆ ಪಡೆಯುವುದಾಗಿ ಹೇಳಿದೆ. ಜುಹು ಮನೆಯನ್ನು 2009ರಲ್ಲಿ ರಾಜ್ ಕುಂದ್ರಾ ಅವರ ತಂದೆ ಖರೀದಿಸಿದ್ದರು. ಇ.ಡಿ. ನೋಟಿಸ್‌ಗೆ ತನ್ನ ಕಕ್ಷೀದಾರರಾದ ದಂಪತಿ ಪ್ರತಿಕ್ರಿಯೆ ನೀಡಿದ್ದಾರೆ’ ಎಂದರು.
‘ಆದಾಗ್ಯೂ, ಕಾನೂನಿಗೆ ವಿರುದ್ಧವಾಗಿ ಸಕ್ಷಮ ಪ್ರಾಧಿಕಾರವು ಸೆ. 18ರಂದು ಮನೆ ವಶಕ್ಕೆ ಪಡೆಯುವ ಕುರಿತು ಹೇಳಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಹಾಗೂ ಅದರ ತೀರ್ಪಿಗೆ ಅನುಗುಣವಾಗಿ ಆಸ್ತಿ ವಶಕ್ಕೆ ಪಡೆಯಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಪ್ರಕರಣದಲ್ಲಿ ಕುಂದ್ರಾ ಅವರ ಪಾತ್ರ ಏನೂ ಇಲ್ಲ’ ವಕೀಲ ಪಾಟೀಲ್ ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.