ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: NCP ನಾಯಕ ಮಲಿಕ್ ಜಾಮೀನು ಅವಧಿ 6 ತಿಂಗಳು ವಿಸ್ತರಣೆ

ಏಜೆನ್ಸೀಸ್
Published 11 ಜನವರಿ 2024, 8:05 IST
Last Updated 11 ಜನವರಿ 2024, 8:05 IST
ನವಾಬ್‌ ಮಲಿಕ್‌
ನವಾಬ್‌ ಮಲಿಕ್‌   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ, ಎನ್‌ಸಿಪಿ ಮುಖಂಡ ನವಾಬ್‌ ಮಲಿಕ್‌ ಅವರಿಗೆ ನೀಡಲಾಗಿರುವ ಜಾಮೀನು ಅವಧಿಯನ್ನು ಇನ್ನೂ ಆರು ತಿಂಗಳವರೆಗೆ ಸುಪ್ರೀಂ ಕೋರ್ಟ್‌ ಗುರುವಾರ ವಿಸ್ತರಿಸಿದೆ.

ಮಲಿಕ್‌ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಪರ ಕೋರ್ಟ್‌ನಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಅವರು, ಜಾಮೀನು ಅವಧಿ ವಿಸ್ತರಣೆಗೆ ಯಾವುದೇ ಆಕ್ಷೇಪವಿಲ್ಲ ಎಂದು ತಿಳಿಸಿದ್ದಾರೆ. ಇದಾದ ಬಳಿಕ, ನ್ಯಾಯಮೂರ್ತಿಗಳಾದ ಬಿ.ಎಂ. ತ್ರಿವೇದಿ ಮತ್ತು ಪಂಕಜ್‌ ಮಿತ್ತಲ್‌ ಅವರಿದ್ದ ಪೀಠ, ಈ ಆದೇಶ ನೀಡಿದೆ.

ಬಾಂಬೆ ಹೈಕೋರ್ಟ್‌, ಮಲಿಕ್‌ ಅವರಿಗೆ ಜಾಮೀನು ನೀಡಲು ನಿರಾಕರಿಸಿ 2023ರ ಜುಲೈ 13ರಂದು ತೀರ್ಪು ನೀಡಿತ್ತು.

ADVERTISEMENT

ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಮಲಿಕ್‌, ಮೂತ್ರಪಿಂಡ ಸಮಸ್ಯೆ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿರುವುದಾಗಿ ತಿಳಿಸಿ, ಜಾಮೀನಿಗೆ ಮನವಿ ಮಾಡಿದ್ದರು. ಅದರಂತೆ 2023ರ ಆಗಸ್ಟ್‌ 11ರಂದು ಎರಡು ತಿಂಗಳ ಅವಧಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು. ಬಳಿಕ ಅಕ್ಟೋಬರ್‌ 12ರಂದು ಮೂರು ತಿಂಗಳ ಅವಧಿಗೆ ಜಾಮೀನು ವಿಸ್ತರಿಸಲಾಗಿತ್ತು.

ಇದೀಗ ಮತ್ತೆ ಆರು ತಿಂಗಳಿಗೆ ಜಾಮೀನು ಅವಧಿ ವಿಸ್ತರಿಸಲಾಗಿದೆ.

1993ರಲ್ಲಿ ಮುಂಬೈ ಮೇಲೆ ನಡೆದ ಸರಣಿ ಬಾಂಬ್‌ ದಾಳಿ ಪ್ರಕರಣದ ರೂವಾರಿ ಮತ್ತು ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜೊತೆಗಿನ ವ್ಯವಹಾರಗಳಲ್ಲಿ ಶಾಮೀಲಾಗಿರುವ ಆರೋಪ ಮಲಿಕ್‌ ಮೇಲಿದೆ. ಹೀಗಾಗಿ, ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 2022ರ ಫೆಬ್ರುವರಿ 23ರಂದು ಮಲಿಕ್‌ ಅವರನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.