ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎನ್‌ಸಿಪಿಯ ನಾಯಕ ನವಾಬ್ ಮಲ್ಲಿಕ್‌ಗೆ, ಸುಪ್ರೀಂಕೋರ್ಟ್ ಮಂಗಳವಾರ ವೈದ್ಯಕೀಯ ಕಾರಣದ ಮೇಲೆ ಜಾಮೀನು ಮಂಜೂರು ಮಾಡಿದೆ.
ಮಾಜಿ ಸಚಿವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಮಲ್ಲಿಕ್ ಪರ ವಕೀಲರು ಸಲ್ಲಿಸಿದ ವರದಿಯನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಪರಿಗಣಿಸಿದೆ.
ಬಾಂಬೆ ಹೈಕೋರ್ಟ್‌ನಲ್ಲಿ ಬಾಕಿ ಇರುವ ಜಾಮೀನು ಅರ್ಜಿಯನ್ನು ವಿಲೇವಾರಿ ಮಾಡುವವರೆಗೂ ಈ ವೈದ್ಯಕೀಯ ಜಾಮೀನು ಮಾನ್ಯವಾಗಿರುತ್ತದೆ ಎಂದು ಹೇಳಿದೆ.
ಜಾರಿ ನಿರ್ದೇಶನಾಲಯದ (ಇ.ಡಿ) ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಜಾಮೀನಿಗೆ ವಿರೋಧ ವ್ಯಕ್ತಪಡಿಸಲಿಲ್ಲ. ಮಧ್ಯಂತರ ವೈದ್ಯಕೀಯ ಜಾಮೀನನ್ನು ಕಾಯಂಗೊಳಿಸಬಹುದು ಎಂದು ಹೇಳಿದರು.
ಉಗ್ರ ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಇ.ಡಿ 2022ರ ಫೆಬ್ರುವರಿಯಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲ್ಲಿಕ್ ಅವರನ್ನು ಬಂಧಿಸಿತ್ತು.
ಮೂತ್ರಪಿಂಡದಲ್ಲಿನ ಸಮಸ್ಯೆಯಿಂದ ಬಳಲುತ್ತಿರುವ ಮಲ್ಲಿಕ್, ಜಾಮೀನು ಕೋರಿ ಮುಂಬೈ ಹೈಕೋರ್ಟ್‌ಗೆ 2023ರ ಜುಲೈ 13ರಂದು ಅರ್ಜಿ ಸಲ್ಲಿಸಿದ್ದರು. ವಿಳಂಬವಾಗಿದ್ದರಿಂದ 2023ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಆಗ ಎರಡು ತಿಂಗಳು ಜಾಮೀನು ದೊರೆತಿತ್ತು. ಆಗಿನಿಂದಲೂ ಜಾಮೀನು ಅವಧಿ ವಿಸ್ತರಣೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.