ADVERTISEMENT

ಬಾಲರಾಮನ ಗರ್ಭಗುಡಿ ಪ್ರವೇಶಿಸಿದ ಕೋತಿ; ಅದ್ಭುತ ಘಟನೆ ಎಂದ ದೇವಸ್ಥಾನ ಟ್ರಸ್ಟ್

ಪಿಟಿಐ
Published 24 ಜನವರಿ 2024, 14:40 IST
Last Updated 24 ಜನವರಿ 2024, 14:40 IST
<div class="paragraphs"><p>ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನ ಮೂರ್ತಿ</p></div>

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನ ಮೂರ್ತಿ

   

ಪಿಟಿಐ ಚಿತ್ರ

ಲಖನೌ: ‘ಅಯೋಧ್ಯೆಯ ಬಾಲರಾಮ ಮಂದಿರದೊಳಗೆ ಕೋತಿಯೊಂದು ಪ್ರವೇಶಿಸಿದ್ದು, ಯಾವುದೇ ತೊಂದರೆ ಮಾಡದೆ ಬಂದ ದಾರಿಯಲ್ಲೇ ಸಾಗಿದೆ. ಇದೊಂದು ಅವಿಸ್ಮರಣೀಯ ಘಟನೆ’ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹೇಳಿದೆ.

ADVERTISEMENT

ಎಕ್ಸ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಟ್ರಸ್ಟ್, ‘ಬಾಲರಾಮನ ದರ್ಶನಕ್ಕಾಗಿ ಸಾಕ್ಷಾತ್ ಹನುಮಂತನೇ ಬಂದಂತೆ ಭಾಸವಾಯಿತು ಎಂದು ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಘಟನೆಯು ಮಂಗಳವಾರ ಸಂಜೆ ನಡೆದಿದೆ’ ಎಂದಿದೆ.

‘ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸೋಮವಾರ ಸಂಪನ್ನಗೊಂಡಿತು. ಮಂಗಳವಾರ ಸಂಜೆ 5.50ರ ಸುಮಾರಿಗೆ ಕೋತಿಯೊಂದು ದಕ್ಷಿಣ ದಿಕ್ಕಿನಿಂದ ದೇವಾಲಯ ಪ್ರವೇಶಿಸಿ, ನೇರವಾಗಿ ಗರ್ಭಗುಡಿಯೊಳಗೆ ಹೋಗಿದೆ. ನಂತರ ಉತ್ಸವ ಮೂರ್ತಿ ಬಳಿ ಕುಳಿತಿದೆ. ಮೂರ್ತಿಯನ್ನು ಕೋತಿ ಬೀಳಿಸಬಹುದು ಎಂದು ಭಾವಿಸಿದ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಇದನ್ನು ಅರಿತ ಕೋತಿ, ಯಾವುದೇ ಒತ್ತಡಕ್ಕೆ ಒಳಗಾಗದೆ ಶಾಂತವಾಗಿ ಉತ್ತರದ ದ್ವಾರದತ್ತ ಹೋಗಿದೆ’ ಎಂದು ಟ್ರಸ್ಟ್ ಹೇಳಿದೆ.

‘ಆ ದ್ವಾರ ಬಂದ್ ಆಗಿದ್ದರಿಂದ, ಪೂರ್ವದ ಬಾಗಿಲಿನಿಂದ ಹೊರಗೆ ಹೋಗಿದೆ. ಬಾಲರಾಮನ ದರ್ಶನಕ್ಕಾಗಿ ನೂರಾರು ಜನರು ಸಾಲುಗಟ್ಟಿ ನಿಂತಿದ್ದರು. ಅವರನ್ನು ಹಾದು ಹೋದ ಕೋತಿ, ಯಾರಿಗೂ ಯಾವುದೇ ರೀತಿಯ ತೊಂದರೆ ಉಂಟು ಮಾಡಿಲ್ಲ. ಬಾಲರಾಮನ ದರ್ಶನಕ್ಕೆ ಸಾಕ್ಷಾತ್ ಹನುಮಂತನೇ ಬಂದಿದ್ದಾನೆ ಎಂದು ಭದ್ರತಾ ಸಿಬ್ಬಂದಿ ಭಾವಿಸಿ ಸಂತಸ ವ್ಯಕ್ತಪಡಿಸಿದರು’ ಎಂದು ಟ್ರಸ್ಟ್ ಹೇಳಿದೆ.

ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಕೃಷ್ಣ ಶಿಲೆಯ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಗೂ ಪೂರ್ವದಲ್ಲಿ ರಾಮಲಲ್ಲಾನ ಪುಟ್ಟ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಇದನ್ನು ಈಗ ಉತ್ಸವ ಮೂರ್ತಿ ಎಂದು ಕರೆಯಲಾಗುತ್ತದೆ. ಇದನ್ನೂ ನೂತನ ಗರ್ಭಗುಡಿಯಲ್ಲಿ ಇಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.