ನವದೆಹಲಿ: ಮುಂಗಾರು ಮಾರುತದ ಮುನ್ನಡೆಯು ವಾಡಿಕೆಗೆ ಅನುಗುಣವಾಗಿಯೇ ಇದ್ದು, ಅದು ದೇಶದ ಎಲ್ಲೆಡೆ ವ್ಯಾಪಿಸಲು ಅಗತ್ಯವಿರುವ ಸ್ಥಿತಿ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದರು.
ಮುಂಗಾರು ಮಾರುತವು ಮುನ್ನಡೆ ಕಾಣುತ್ತದೆ. ಅದು ಜೂನ್ 1ರ ಬದಲು, ಮೇ 31ರಂದೇ ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಮಹಾಪಾತ್ರ ಹೇಳಿದರು. ದೇಶದ ಬಹುತೇಕ ಭಾಗಗಳಲ್ಲಿ ಈ ವರ್ಷ ಮುಂಗಾರು ಮಳೆಯು ವಾಡಿಕೆಗಿಂತ ತುಸು ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರಿನ ಅವಧಿಯಲ್ಲಿ ಭಾರತದ ಕೇಂದ್ರ ಭಾಗದಲ್ಲಿ ಹಾಗೂ ದಕ್ಷಿಣ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ. ವಾಯವ್ಯ ಭಾಗದಲ್ಲಿ ವಾಡಿಕೆಗೆ ತಕ್ಕಷ್ಟು ಮಳೆಯಾಗಲಿದೆ. ಈಶಾನ್ಯ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ ಎಂದು ಇಲಾಖೆಯು ಹೇಳಿದೆ.
ಮುಂಗಾರು ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಗೆ ಹೋಲಿಸಿದರೆ ಈ ಬಾರಿ ಶೇ 106ರಷ್ಟು ಇರಲಿದೆ. ಈ ಲೆಕ್ಕಾಚಾರದಲ್ಲಿ ಶೇ 4ರಷ್ಟು ವ್ಯತ್ಯಾಸ ಆಗಲೂಬಹುದು ಎಂದು ಅದು ಹೇಳಿದೆ.
ಮತ್ತೆ ಬಿಸಿಗಾಳಿ
ನವದೆಹಲಿ: ದೇಶದ ವಾಯವ್ಯ ಭಾಗದಲ್ಲಿ ಹಾಗೂ ಕೇಂದ್ರದ ಭಾಗಕ್ಕೆ ಹೊಂದಿರುವ ಪ್ರದೇಶಗಳಲ್ಲಿ ಜೂನ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಸಿಗಾಳಿಯ ದಿನಗಳು ಇರಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಮುಂದಿನ ಕೆಲವು ದಿನಗಳವರೆಗೆ ಹೆಚ್ಚಿನ ತಾಪಮಾನದಿಂದ ವಿನಾಯಿತಿ ಸಿಗಲಿದೆ ಎಂದು ಅದು ಹೇಳಿದೆ.
‘ವಾಯವ್ಯ ಭಾರತದಲ್ಲಿ ಹಾಗೂ ಅದರ ಅಕ್ಕ–ಪಕ್ಕದಲ್ಲಿ ಇರುವ ಪ್ರದೇಶಗಳಲ್ಲಿ ಜೂನ್‌ನಲ್ಲಿ ಎರಡರಿಂದ ಮೂರು ದಿನಗಳ ಕಾಲ ಉಷ್ಣಗಾಳಿಯ ಪ್ರಭಾವ ಇರುವುದು ವಾಡಿಕೆ. ಈ ಬಾರಿ ಈ ಪ್ರದೇಶಗಳಲ್ಲಿ ಉಷ್ಣ ಗಾಳಿಯ ಪ್ರಭಾವವು ನಾಲ್ಕರಿಂದ ಆರು ದಿನಗಳವರೆಗೆ ಇರಬಹುದು ಎಂಬುದು ನಮ್ಮ ನಿರೀಕ್ಷೆ’ ಎಂದು ಮಹಾಪಾತ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮೇ ತಿಂಗಳಲ್ಲಿ ಒಂಬತ್ತರಿಂದ 12 ದಿನಗಳ ಕಾಲ ಉಷ್ಣಗಾಳಿಯ ಪ್ರಭಾವ ಇತ್ತು. ಅಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ನಿಂದ 50 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿತ್ತು ಎಂದು ಅವರು ಹೇಳಿದರು. ಅಸ್ಸಾಂ ಕೂಡ ಉಷ್ಣಗಾಳಿಯ ಪ್ರಭಾವವನ್ನು ಅನುಭವಿಸಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.