ADVERTISEMENT

ಮಾನ್ಸೂನ್: ಹಿಮಾಚಲದಲ್ಲಿ ಒಂದು ತಿಂಗಳೊಳಗೆ 40 ಸಾವು

ಪಿಟಿಐ
Published 20 ಜುಲೈ 2024, 15:29 IST
Last Updated 20 ಜುಲೈ 2024, 15:29 IST
   

ಶಿಮ್ಲಾ/ನಹಾನ್: ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಆರಂಭವಾಗಿ ಕೇವಲ ಒಂದು ತಿಂಗಳೊಳಗೆ ಸುಮಾರು 40 ಜನರು ಮೃತಪಟ್ಟಿದ್ದು, ₹329 ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ವರದಿ ಮಾಡಿದೆ.

ಶುಕ್ರವಾರ ತಡರಾತ್ರಿ ಸಿರ್ಮೌರ್ ಜಿಲ್ಲೆಯ ರೈತುವಾ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಒಬ್ಬ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾರೆ.

ಘಟನೆಯ ಕುರಿತು ತಿಳಿಯುತ್ತಿದ್ದಂತೆ ಪುರುವಾಲಾ ಪೊಲೀಸ್ ಠಾಣೆಯ ತಂಡವು ಸ್ಥಳೀಯ ನಿವಾಸಿಗಳ ಸಹಾಯ ಪಡೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಪೌಂಟಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗುಂಜೀತ್ ಚೀಮಾ ಅವರು ತಿಳಿಸಿದ್ದಾರೆ.

ADVERTISEMENT

ಕೊಚ್ಚಿ ಹೋದ ವ್ಯಕ್ತಿ ದಂಡಾ ಅಂಜ್ ಗ್ರಾಮದ ನಿವಾಸಿ ಅಮನ್ ಸಿಂಗ್ (48)  ಎಂದು ಗುರುತಿಸಲಾಗಿದ್ದು, ಶನಿವಾರ ಬೆಳಿಗ್ಗೆ ಟೋನ್ಸ್ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಪ್ರವಾಹದಲ್ಲಿ ಸಿಂಗ್ ಅವರೊಂದಿಗೆ ಅವರ ಮಗಳು ಸಿಲುಕಿದ್ದಳು. ಆದರೆ ಸಿಂಗ್ ಮಗಳನ್ನು ರಕ್ಷಿಸಿ, ತಾವು ಪ್ರವಾಹದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳೀಯ ಹವಾಮಾನ ಕಚೇರಿ ಶನಿವಾರ ಸಿರ್ಮೌರ್ ಮತ್ತು ಶಿಮ್ಲಾ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಿದ್ದು, ರಾಜ್ಯದ ಹಲವು ಪ್ರದೇಶಗಳಿಗೆ ‘ಆರೆಂಜ್’ ಆಲರ್ಟ್ ಘೋಷಿಸಿದೆ. ಅಲ್ಲದೆ, ಜುಲೈ 21, 22, 24 ಮತ್ತು 25 ರಂದು ರಾಜ್ಯದ ಪ್ರತ್ಯೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ‘ಯೆಲ್ಲೋ’ ಆಲರ್ಟ್ ಘೋಷಿಸಿದೆ.

ಪ್ರವಾಹದಿಂದ ಸಿಲುಕಿಕೊಂಡಿದ್ದ 100 ಜನರ ರಕ್ಷಣೆ

ಬಹರೈಚ್‌ (ಪಿಟಿಐ): ಉತ್ತರ ಪ್ರದೇಶದ ಘಾಘ್ರಾ ನದಿಯಲ್ಲಿ ಪ್ರವಾಹ ಉಂಟಾದ ಕಾರಣ ನೇಪಾಳಕ್ಕೆ ಹೆಚ್ಚುವರಿ ನೀರು ಹರಿಸಲಾಯಿತು. ಇದರಿಂದಾಗಿ ನೇಪಾಳದ 100ಕ್ಕೂ ಹೆಚ್ಚು ಗ್ರಾಮಸ್ಥರು ಪ್ರವಾಹದಿಂದಾಗಿ ಸಿಲುಕಿಕೊಂಡಿದ್ದರು. ಈ ಸಂತ್ರಸ್ತರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ
ತಿಳಿಸಿದ್ದಾರೆ.  

ಭಾರತ-ನೇಪಾಳ ಗಡಿಗೆ ಸಮೀಪವಿರುವ ಚಹಲ್ವಾ ಗ್ರಾಮದ 115 ನಿವಾಸಿಗಳು ಶುಕ್ರವಾರ, ನೀರಿನ ಮಟ್ಟ ಕಡಿಮೆ ಇದ್ದ ಕಾರಣ ನದಿ (ಘಾಘ್ರಾ ನದಿಯ ಮತ್ತೊಂದು ಭಾಗ) ದಾಟಿ ಹೊಲಗಳಿಗೆ ಹೋಗಿದ್ದರು. ಸಂಜೆ 6 ಗಂಟೆ ಸುಮಾರಿಗೆ ಉತ್ತರಪ್ರದೇಶದಿಂದ ಅಧಿಕ ಪ್ರಮಾಣದ ನೀರು ಬಿಟ್ಟಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಗ್ರಾಮಸ್ಥರು ಪರದಾಡುವಂತಾಯಿತು ಎಂದು ಶನಿವಾರ ಉತ್ತರ ಪ್ರದೇಶದ ಪರಿಹಾರ ಆಯುಕ್ತರ ಕಚೇರಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನದಿ ಉಕ್ಕಿ ಹರಿಯುತ್ತಿದ್ದಂತೆ 63 ಜನರು ದೋಣಿಗಳ ಮೂಲಕ ಸುರಕ್ಷಿತವಾಗಿ‌‌‌‌‌‌‌‌‌‌‌‌‌‌ ಬಂದಿದ್ದು, ಉಳಿದ ಗ್ರಾಮಸ್ಥರು ಹೊಲಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅದು ಹೇಳಿದೆ.

ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ), ಪ್ರಾಂತೀಯ ಸಶಸ್ತ್ರ ಪೊಲೀಸ್ (ಪಿಎಸಿ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರಲಾಯಿತು ಎಂದು ಹೇಳಿಕೆ ತಿಳಿಸಿದೆ.

ಗ್ರಾಮಸ್ಥರಿಗೆ ಆಹಾರ ವಿತರಿಸಲಾಗಿದ್ದು, ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು
ತಿಳಿಸಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಪೊಲೀಸರು ಮತ್ತು ನೀರಾವರಿ ಸೇರಿದಂತೆ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಪರಿಸ್ಥಿತಿ ಸಹಜವಾಗುವವರೆಗೆ ಸ್ಥಳದಲ್ಲೇ ಇರುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.