ಲಖನೌ: ಉತ್ತರ ಪ್ರದೇಶದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಯಿಂದಾಗಿ ವಿಧಾನಸಭೆಯ ಕಚೇರಿಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದೆ. ವಿಧಾನಮಂಡಲದ ಕಲಾಪ ನಡೆಯುತ್ತಿರುವಾಗಲೇ ಮಳೆಯ ನೀರು ವಿಧಾನಸಭೆಗೆ ನುಗ್ಗಿದೆ.
ರಾಜ್ಯ ರಾಜಧಾನಿ ಲಖನೌ ಸೇರಿದಂತೆ ವಿಧಾನಭವನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡೂವರೆಗೆ ಗಂಟೆ ಕಾಲ ನಿರಂತರವಾಗಿ ಸುರಿದ ಮಳೆಯಿಂದ ವಿಧಾನಸಭೆ ಕಟ್ಟಡದ ಪ್ರವೇಶ ದ್ವಾರ, ಕೆಲವು ಕೊಠಡಿಗಳಲ್ಲಿ ನೀರು ನಿಂತಿತ್ತು. ಇದರಿಂದಾಗಿ ಸಿಬ್ಬಂದಿ ಬಕೆಟ್ ಮತ್ತು ನೆಲ ಒರೆಸುವ ಬಟ್ಟೆಯಿಂದ ಮಳೆ ನೀರನ್ನು ತೆಗೆದುಹಾಕಿದರು.
ಈ ಘಟನೆಯನ್ನು ಬಳಸಿಕೊಂಡು ಪ್ರತಿಪಕ್ಷಗಳು, ಸರ್ಕಾರವನ್ನು ಟೀಕಿಸಿವೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ವಿಧಾನಸಭೆಗೆ ಬಜೆಟ್ ಅಗತ್ಯವಿದೆ. ಕೇವಲ ಒಂದು ಮಳೆಗೆ ವಿಧಾನಸಭೆಯಲ್ಲಿ ಇಂಥ ಪರಿಸ್ಥಿತಿ ಉದ್ಭವವಾಗಿದೆ ಎಂದರೆ ಇನ್ನು ರಾಜ್ಯದ ಪರಿಸ್ಥಿತಿಯನ್ನು ದೇವರೇ ಕಾಪಾಡಬೇಕು ಎಂದು ‘ಎಕ್ಸ್’ನಲ್ಲಿ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಶಿವಪಾಲ್ ಸಿಂಗ್ ಯಾದವ್ ಟೀಕಿಸಿದ್ದಾರೆ. ಅಲ್ಲದೆ, ವಿಧಾನಸಭೆಯಲ್ಲಿ ನೀರು ನಿಂತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪ ನಡೆಯುವ ಕಚೇರಿಗಳಿಗೆ ಯಾವುದೇ ಹಾನಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.