ADVERTISEMENT

ಸಿಧು ಮೂಸೆವಾಲಾ ಕೊಲೆ ಪ್ರಕರಣದ ಆರೋಪಿ ಪೊಲೀಸ್‌ ಕಸ್ಟಡಿಯಿಂದ ಪರಾರಿ!

ಪಿಟಿಐ
Published 2 ಅಕ್ಟೋಬರ್ 2022, 9:11 IST
Last Updated 2 ಅಕ್ಟೋಬರ್ 2022, 9:11 IST
ಸಿಧು ಮೂಸೆವಾಲಾ
ಸಿಧು ಮೂಸೆವಾಲಾ   

ಚಂಡೀಗಢ: ಗಾಯಕ, ಕಾಂಗ್ರೆಸ್‌ ಮುಖಂಡ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಗ್ಯಾಂಗ್‌ಸ್ಟರ್ ದೀಪಕ್ ಟಿನು ಎಂಬಾತ ಶನಿವಾರ ರಾತ್ರಿ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.

ಮಾನ್ಸಾ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಟಿನುನನ್ನು ‘ಪ್ರೊಡಕ್ಷನ್‌ ವಾರಂಟ್‌’ ಮೇಲೆ ಗೋಯಿಂದ್‌ವಾಲ್ ಸಾಹಿಬ್ ಜೈಲಿನಿಂದ ಕರೆತರುವಾಗ ಶನಿವಾರ ರಾತ್ರಿ ಆತ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿನು, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಆಪ್ತ. ಪಂಜಾಬಿ ಗಾಯಕ ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಆತ ಆರೋಪಿಯೂ ಕೂಡ.

ADVERTISEMENT

‘ಟಿನುನನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಶೀಘ್ರದಲ್ಲೇ ಆತನನ್ನು ನಾವು ಹಿಡಿಯುತ್ತೇವೆ’ ಎಂದು ಬಟಿಂಡಾ ರೇಂಜ್ ಐಜಿಯಾಗಿ ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿರುವ, ಪಟಿಯಾಲಾ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಮುಖ್ವಿಂದರ್ ಸಿಂಗ್ ಚೀನಾ ಅವರು ಪಿಟಿಐಗೆ ಫೋನ್ ಮೂಲಕ ತಿಳಿಸಿದ್ದಾರೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ (ಶುಭದೀಪ್ ಸಿಂಗ್ ಸಿಧು) ಅವರ ಮೇಲೆ ಗುಂಡಿನ ದಾಳಿ ಮಾಡಿ ಕೊಲೆಗೈಯ್ಯಲಾಗಿತ್ತು.

ಮಾನ್ಸಾದ ಜವಾಹರ್ ಕೆ ಗ್ರಾಮಕ್ಕೆ ಸ್ನೇಹಿತರು ಮತ್ತು ಸೋದರ ಸಂಬಂಧಿಯೊಂದಿಗೆ ತೆರಳುತ್ತಿದ್ದ ವೇಳೆ ಸಿಧು ಅವರ ಜೀಪ್‌ ಮೇಲೆ ತಂಡವೊಂದು ಗುಂಡಿನ ಮಳೆಗರೆದಿತ್ತು. ಈ ಘಟನೆಯಲ್ಲಿ ಸಿಧು ಮೂಸೆವಾಲ ಹತ್ಯೆಯಾಗಿದ್ದರು.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಗೋಲ್ಡಿ ಬ್ರಾರ್ ಎಂಬಾತ ಮೂಸೆವಾಲ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದ.

ಕೊಲೆ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿರುವ 24 ಆರೋಪಿಗಳಲ್ಲಿ ಟಿನು ಕೂಡ ಒಬ್ಬ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.