ADVERTISEMENT

ಮಣಿಪುರ | ಮತದಾನ ಬಹಿಷ್ಕಾರ: ಕುಕಿ ಸಂಘಟನೆಗಳ ನಿರ್ಧಾರ

ಸಂಘರ್ಷಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರದ ಘಟನೆ

ಪಿಟಿಐ
Published 15 ಏಪ್ರಿಲ್ 2024, 14:23 IST
Last Updated 15 ಏಪ್ರಿಲ್ 2024, 14:23 IST
<div class="paragraphs"><p>ಸಂಘರ್ಷಪೀಡಿತ ಮಣಿಪುರದ ನಿರಾಶ್ರಿತರ ಶಿಬಿರದಲ್ಲಿ ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗಿರುವುದು </p></div>

ಸಂಘರ್ಷಪೀಡಿತ ಮಣಿಪುರದ ನಿರಾಶ್ರಿತರ ಶಿಬಿರದಲ್ಲಿ ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗಿರುವುದು

   

–ಪಿಟಿಐ ಚಿತ್ರ

ಚುರಚಂದಪುರ: ಸಂಘರ್ಷಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರದ ಘಟನೆಗಳು ನಡೆದಿದ್ದು, ಅದರ ಬೆನ್ನಲ್ಲೇ ‘ನ್ಯಾಯ ಇಲ್ಲದಿದ್ದರೆ, ಮತ ಇಲ್ಲ’ ಎಂದು ಘೋಷಿಸಿರುವ ಕುಕಿ ಸಂಘಟನೆಗಳು ಮತದಾನ ಬಹಿಷ್ಕರಿಸುವುದಾಗಿ ತಿಳಿಸಿವೆ.

ADVERTISEMENT

ಪೂರ್ವ ಇಂಫಾಲ್‌ನಲ್ಲಿ ಶನಿವಾರ ಎರಡು ಶಸ್ತ್ರಸಜ್ಜಿತ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಅದರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ತೆಂಗ್‌ನೌಪಾಲ್ ಜಿಲ್ಲೆಯಲ್ಲಿ ಶುಕ್ರವಾರ ಹಳ್ಳಿಯ ಶಸ್ತ್ರಸಜ್ಜಿತ ಸ್ವಯಂಸೇವಕರು ಮತ್ತು ಅಪರಿಚಿತರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ತಾವು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಈ ಹಿಂದೆಯೇ ಕುಕಿಗಳು ಘೋಷಿಸಿದ್ದರು.

ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಮಾಜಿ ಸಂಸದರಾದ ಕಿಮ್ ಗಾಂಗ್ಟೆ ಮತ್ತು ದೆಹಲಿಯ ಕುಕಿ ಝೋಮಿ ಹಮರ್ ಮಹಿಳಾ ವೇದಿಕೆಗಳನ್ನು ಒಳಗೊಂಡ ಕುಕಿ ಮಹಿಳೆಯರ ಸಂಘಟನೆಯಾದ ‘ಗ್ಲೋಬಲ್ ಕುಕಿ ಝೋಮಿ ಹಮರ್ ವುಮೆನ್ ಕಮ್ಯುನಿಟಿ’ಯು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆಯುವ ಮೂಲಕ ಬಹಿಷ್ಕಾರದ ನಿರ್ಧಾರ ತಿಳಿಸಿದ್ದರು.

ಅವುಗಳ ಜತೆಗೆ ಈಗ ಕುಕಿ ನ್ಯಾಷನಲ್ ಅಸೆಂಬ್ಲಿ ಮತ್ತು ಕುಕಿ ಇನ್ಪಿ ಸಂಘಟನೆಗಳು ಕೂಡಾ ಧ್ವನಿಗೂಡಿಸಿವೆ.

‘ನಾವು ನಮ್ಮ ಅಸಂತೃಪ್ತಿಯನ್ನು ನಾಯಕರಿಗೆ ತಿಳಿಸಿದ್ದೇವೆ. ಪಾಕಿಸ್ತಾನ, ಚೀನಾದ ಬೆದರಿಕೆಗಳನ್ನು ತಡೆಯುವಷ್ಟು ಮತ್ತು ಅವಕ್ಕೆ ಎದಿರೇಟು ಕೊಡುವಷ್ಟು ಸಮರ್ಥವಾಗಿರುವ ಭಾರತದ ಸೇನೆ, ಉಗ್ರರಿಂದ ಮುಗ್ಧ ಪ್ರಜೆಗಳನ್ನು ರಕ್ಷಿಸುವಲ್ಲಿ ಸೋತಿರುವುದರಿಂದ ನಮಗೆ ನಿರಾಶೆಯಾಗಿದೆ. ಇದರಿಂದಾಗಿ ಭಾರತೀಯ ಸಂವಿಧಾನದಲ್ಲಿ ಮತ್ತು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎನ್ನುವ ಹೇಳಿಕೆಯಲ್ಲಿ ನಮಗೆ ನಂಬಿಕೆ ನಶಿಸಿದೆ’ ಎಂದು ಕುಕಿ ನ್ಯಾಷನಲ್ ಅಸೆಂಬ್ಲಿಯ ವಕ್ತಾರ ಮಾಂಗ್‌ಬೊಯ್ ಹೋಕಿಪ್ ಹೇಳಿದ್ದಾರೆ.

ಕುಕಿ ಇನ್ಪಿ ಸಂಘಟನೆಯು ಮತದಾನವನ್ನು ಬಹಿಷ್ಕರಿಸಿ ಭಾನುವಾರ ನಿರ್ಣಯ ಕೈಗೊಂಡಿವೆ. ಮಣಿಪುರದಲ್ಲಿ ಹಿಂಸಾಚಾರ ಆರಂಭಗೊಂಡ ನಂತರ ಆದಿವಾಸಿ ಸಂಘಟನೆಗಳ ಒಕ್ಕೂಟವಾಗಿ ಬದಲಾಗಿರುವ ಸ್ಥಳೀಯ ಆದಿವಾಸಿ ಮುಖಂಡರ ವೇದಿಕೆ (ಐಟಿಎಲ್‌ಎಫ್‌) ಶನಿವಾರ ಹೇಳಿಕೆ ನೀಡಿದ್ದು, ‘ಶಾಂತಿ ಕಾಪಾಡಲು ಕೇಂದ್ರ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ. ಆದರೆ, ಅವರ ಕಾರ್ಯವೈಖರಿಯು ಲೋಕಸಭಾ ಚುನಾವಣೆಗೆ ಮುನ್ನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ’ ಎಂದಿದೆ.

ಮಣಿಪುರದಲ್ಲಿ ಏಪ್ರಿಲ್ 19 ಮತ್ತು ಏಪ್ರಿಲ್ 26ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಸೋಮವಾರ ಗೃಹ ಸಚಿವ ಅಮಿತ್ ಶಾ ರ್‍ಯಾಲಿ ನಡೆಸಿದರು.

ರಾಜ್ಯದಲ್ಲಿ ಹೆಚ್ಚು ಮತದಾನವಾಗುವ ಪರಂಪರೆಯಿದ್ದು, 2019ರ ಚುನಾವಣೆಯಲ್ಲಿ ಶೇ 82ಕ್ಕಿಂತ ಹೆಚ್ಚು ಮತದಾನ ದಾಖಲಾಗಿತ್ತು. ಆದರೆ, ಈ ಬಾರಿ ಜನಾಂಗೀಯ ಹಿಂಸಾಚಾರವು ಚುನಾವಣೆಯ ಮೇಲೆ ಕರಿನೆರಳು ಬೀರಿದ್ದು, ಸಂಘರ್ಷದ ಸ್ಥಿತಿಯಲ್ಲಿ ಚುನಾವಣೆ ಬೇಕೇ ಎಂದು ಅಲ್ಲಿನ ಕೆಲವು ಸಂಘಟನೆಗಳು ಪ್ರಶ್ನಿಸುತ್ತಿವೆ.

ಕಣದಲ್ಲಿ ಕುಕಿ ಅಭ್ಯರ್ಥಿಗಳ ಗೈರು
ಔಟರ್ ಮಣಿಪುರ ಲೋಕಸಭಾ (ಎಸ್‌ಟಿ ಮೀಸಲು) ಕ್ಷೇತ್ರವನ್ನು ಇದುವರೆಗೆ ಆರು ನಾಗಾ ಮತ್ತು ಐವರು ಕುಕಿ ಮುಖಂಡರು ಪ್ರತಿನಿಧಿಸಿದ್ದಾರೆ. ಈ ಬಾರಿ ಕುಕಿಗಳು ಚುನಾವಣೆ ಬಹಿಷ್ಕರಿಸಿರುವುದರಿಂದ ಕಣದಲ್ಲಿ ನಾಗಾಗಳೇ ಇದ್ದಾರೆ.   ಔಟರ್ ಮಣಿಪುರದ ಎಂಟು ಲಕ್ಷ ಮತದಾರರ ಪೈಕಿ ನಾಗಾ ಮತದಾರರ ಸಂಖ್ಯೆ 4.61 ಲಕ್ಷ ಮತ್ತು ಕುಕಿ ಮತದಾರರ ಸಂಖ್ಯೆ 3.21 ಲಕ್ಷ ಆಗಿದೆ. ಚುನಾವಣಾ ಆಯೋಗದ ಪ್ರಕಾರ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ 24 ಸಾವಿರಕ್ಕೂ ಹೆಚ್ಚು ಮಂದಿ ಮತದಾನಕ್ಕೆ ಅರ್ಹರಾಗಿದ್ದು ಅವರಿಗಾಗಿ 94 ಮತಗಟ್ಟೆಗಳನ್ನು ಸ್ಥಾ‍ಪಿಸಲಾಗಿದೆ.
‘ಮಣಿಪುರದಲ್ಲಿ ಶಾಂತಿ ಸ್ಥಾಪನೆಯೇ ಆದ್ಯತೆ’
ಇಂಫಾಲ್: ಜನಾಂಗೀಯ ಹಿಂಸಾಚಾರದಿಂದ ಕೂಡಿರುವ ಮಣಿಪುರದಲ್ಲಿ ಎಲ್ಲ ಸಮುದಾಯಗಳನ್ನು ಜತೆಗೆ ಕೊಂಡೊಯ್ಯುವ ಮೂಲಕ ಶಾಂತಿ ಸ್ಥಾಪಿಸುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ. ಇಂಫಾಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ‘ಲೋಕಸಭಾ ಚುನಾವಣೆಯು ಮಣಿಪುರವನ್ನು ಒಡೆಯಲು ಯತ್ನಿಸುತ್ತಿರುವ ಶಕ್ತಿಗಳು ಮತ್ತು ಅದನ್ನು ಒಗ್ಗಟ್ಟಾಗಿಯೇ ಇಡಲು ಪ್ರಯತ್ನಿಸುತ್ತಿರುವವರ ನಡುವೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ. ಈಶಾನ್ಯ ರಾಜ್ಯದ ಜನಸಂಖ್ಯೆಯನ್ನು ಏರುಪೇರು ಮಾಡಲು ಒಳನುಸುಳುವಿಕೆಯನ್ನು ಬೆಂಬಲಿಸಲಾಯಿತು ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.