ನವದೆಹಲಿ: ಲೋಕಸಭೆಯ ಒಳಗೆ ಹಾಗೂ ಸಂಸತ್‌ನ ಹೊರಗೆ ಕ್ಯಾನ್ ಮೂಲಕ ಬಣ್ಣದ ಹೊಗೆ ಸಿಂಪಡಿಸುವ ಮೂಲಕ ಗಮನ ಸೆಳೆಯುವ ಪ್ರಯತ್ನದಲ್ಲಿ ಒಟ್ಟು ಆರು ಜನರು ಇರುವ ಶಂಕೆ ಇದೆ. ಸದ್ಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕೃತ್ಯದಲ್ಲಿ ಪಾಲ್ಗೊಂಡವರೆಲ್ಲರೂ ಪರಸ್ಪರ ಪರಿಚಿತರು ಹಾಗೂ ಗುರುಗ್ರಾಮದಲ್ಲಿ ಒಂದೇ ಮನೆಯಲ್ಲಿರುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ನಂತರ ಅಮೋಲ್ ಶಿಂದೆ ಹಾಗೂ ನೀಲಂ ಅವರನ್ನು ಸಂಸತ್ ಭವನದ ಹೊರಗೆ ವಶಕ್ಕೆ ಪಡೆದರೆ, ಸಾಗರ್ ಶರ್ಮಾ ಹಾಗೂ ಡಿ. ಮನೋರಂಜನ್ ಈ ಇಬ್ಬರನ್ನು ಲೋಕಸಭೆಯ ಸದನದಲ್ಲಿ ವಶಕ್ಕೆ ಪಡೆಯಲಾಯಿತು. ಸದ್ಯ ಈ ನಾಲ್ಕೂ ಜನ ಪೊಲೀಸ್ ವಶದಲ್ಲಿದ್ದಾರೆ. ಇದೇ ಗುಂಪಿನ ಸದಸ್ಯರು ಎಂದು ಶಂಕಿಸಲಾಗಿರುವ ಲಲಿತ್ ಹಾಗೂ ವಿಕ್ರಮ್ ಎಂಬ ಇಬ್ಬರು ಇವರೊಂದಿಗೆ ಇದ್ದರು ಎಂಬುದು ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನಾಲ್ವರನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಐದನೇ ವ್ಯಕ್ತಿಯನ್ನೂ ಗುರುತಿಸಿದ್ದೇವೆ. ಇವರೆಲ್ಲರೂ ಒಟ್ಟಿಗೆ ಇರುತ್ತಾರೆ. ಇದು ಪೂರ್ವಯೋಜಿತ ಕೃತ್ಯವಾಗಿದೆ. ಬಂಧಿತರ ಬಳಿ ಯಾವುದೇ ಫೋನ್‌ಗಳು ಪತ್ತೆಯಾಗಿಲ್ಲ. ಅದಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.