ಪ್ರಯಾಗರಾಜ್ (ಉತ್ತರ ಪ್ರದೇಶ): ಮಕರ ಸಂಕ್ರಾಂತಿ ದಿನವಾದ ಸೋಮವಾರ(ಇಂದು) 12 ಲಕ್ಷಕ್ಕೂ ಹೆಚ್ಚು ಭಕ್ತರು ಮೂರು ಪವಿತ್ರ ನದಿಗಳ ಸಂಗಮವಾದ ಪ್ರಯಾಗರಾಜ್ ಬಳಿಯ ‘ಸಂಗಮ'ದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಒಂದೂವರೆ ತಿಂಗಳ ಅವಧಿಯ 'ಮಾಘ ಮೇಳ' ಕೂಡ ಮಕರ ಸಂಕ್ರಾಂತಿ ಆಚರಣೆಯೊಂದಿಗೆ ಪ್ರಾರಂಭವಾಗಿದೆ. ಮಧ್ಯಾಹ್ನ 12ಗಂಟೆ ವೇಳೆಗೆ ಸುಮಾರು 12.50 ಲಕ್ಷ ಭಕ್ತರು ಗಂಗಾ ನದಿಯಲ್ಲಿ ಮಿಂದೆದಿದ್ದಾರೆ ಎಂದು ಮಾಘ ಮೇಳದ ಅಧಿಕಾರಿ ದಯಾನಂದ ಪ್ರಸಾದ್ ತಿಳಿಸಿದರು.
ಸಂಗಮ ಗಂಗಾ, ಯಮುನಾ ಮತ್ತು ಸರಸ್ವತಿ ಈ ಮೂರು ನದಿಗಳ ಸಂಗಮವಾಗಿದೆ. ನಿನ್ನೆ ತಡರಾತ್ರಿಯಿಂದಲೇ ಸಂಗಮಕ್ಕೆ ಭಕ್ತರು ಬರಲಾರಂಭಿಸಿದ್ದಾರೆ ಎಂದು ಅರ್ಚಕ ರಾಜೇಂದ್ರ ಮಿಶ್ರಾ ಹೇಳಿದರು.
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಯಾತ್ರಾರ್ಥಿಗಳಿಗಾಗಿ 8 ಸ್ನಾನಗೃಹ ಹಾಗೂ 6 ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗಿದೆ. ಮೇಳದ ಮೈದಾನದಲ್ಲಿ 18 ಸಾವಿರ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಲ್ಲದೇ ಎರಡು ತಾತ್ಕಾಲಿಕ ಆಸ್ಪತ್ರೆಗಳು, 14 ಪೊಲೀಸ್ ಠಾಣೆಗಳು, 41 ಪೊಲೀಸ್ ಚೌಕಿಗಳು ಮತ್ತು 14 ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲಾಗಿದೆ.
ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಮುಂಜಾನೆ 4 ಗಂಟೆಗೆ ಗೋರಖನಾಥ ದೇವಾಲಯದಲ್ಲಿ ಮಹಾಯೋಗಿ ಗೋರಖನಾಥ ದೇವರಿಗೆ ಪವಿತ್ರ ಖಿಚಡಿ ಅರ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜನರು ನದಿ ಮತ್ತು ಕೊಳಗಳಲ್ಲಿ ಸ್ನಾನ ಮಾಡುವ ಮೂಲಕ ಭಾರತದ ಪ್ರಾಚೀನ ಸಂಪ್ರದಾಯದ ಮೇಲಿನ ನಂಬಿಕೆಯನ್ನು ಬಲಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.