ADVERTISEMENT

Wayanad Landslide | 218 ಮೃತದೇಹಗಳು ಪತ್ತೆ

200ಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 0:09 IST
Last Updated 4 ಆಗಸ್ಟ್ 2024, 0:09 IST
<div class="paragraphs"><p>ವಯನಾಡ್ ಭೂಕುಸಿತ</p></div>

ವಯನಾಡ್ ಭೂಕುಸಿತ

   

(ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.)

ತಿರುವನಂತಪುರ: ವಯನಾಡ್‌ ಜಿಲ್ಲೆಯ ಚೂರಲ್‌ಮಲ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾದವರಿಗೆ ಶೋಧಕಾರ್ಯ ಶನಿವಾರವೂ ಮುಂದುವರಿಯಿತು. 

ADVERTISEMENT

ಇದುವರೆಗೆ 218 ಮೃತದೇಹಗಳು ಪತ್ತೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 200 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಅನಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 365. 67 ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಶನಿವಾರ ಶೋಧ ಕಾರ್ಯದ ವೇಳೆ 15 ಮೃತದೇಹಗಳು ದೊರೆತಿವೆ.

ರಕ್ಷಣಾ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಶನಿವಾರ ಮಧ್ಯಾಹ್ನದವರೆಗಿನ ಮಾಹಿತಿ ಪ್ರಕಾರ ಸುಮಾರು 206 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಗರಿಷ್ಠ ಸಂಖ್ಯೆಯ ಜೀವಗಳನ್ನು ರಕ್ಷಿಸುವುದು ನಮ್ಮ ಗುರಿಯಾಗಿತ್ತು. ಅವಶೇಷಗಳ ಅಡಿಯಲ್ಲಿ ಯಾರಾದರೂ ಜೀವಂತವಾಗಿದ್ದರೆ, ಅವರನ್ನು ಉಳಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶನಿವಾರ ಹೇಳಿದರು.

‘ಪತ್ತೆಯಾದ ಮೃತದೇಹಗಳಲ್ಲಿ ಹೆಚ್ಚಿನವು ಚಾಲಿಯಾರ್‌ ನದಿಯಲ್ಲಿ ಶೋಧ ಕಾರ್ಯದ ವೇಳೆ ದೊರೆತಿವೆ. ಅಲ್ಲಿ ಶೋಧ ಕಾರ್ಯಕ್ಕೆ 40 ತಂಡಗಳನ್ನು ನಿಯೋಜಿಸಲಾಗಿದೆ. ಡ್ರೋನ್‌ಗಳು, ಥರ್ಮಲ್ ರೇಡಾರ್‌ ಸ್ಕ್ಯಾನರ್‌ ಹಾಗೂ 11 ಶ್ವಾನಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಸೂಚಿಪಾರ ಜಲಪಾತದ ಬಳಿ ಶೋಧಕಾರ್ಯಕ್ಕೆ ತೆರಳಿ ಸಿಲುಕಿಕೊಂಡಿದ್ದ ಸಲೀಂ (36) ಮತ್ತು ಮೊಹ್ಸಿನ್ (32) ಎಂಬವರನ್ನು ಸೇನೆಯ ಹೆಲಿಕಾಪ್ಟರ್‌ ಮೂಲಕ ಶನಿವಾರ ರಕ್ಷಿಸಲಾಯಿತು. 

ಒಂದೇ ಕುಟುಂಬದ 8 ಮಂದಿ ಮೃತದೇಹ ಪತ್ತೆ

ಸಿದ್ದಾಪುರ (ಕೊಡಗು ಜಿಲ್ಲೆ): ‘ವಯನಾಡ್‌ ಭೂಕುಸಿತ ದುರಂತದ ನಂತರ ನಾಪತ್ತೆಯಾಗಿದ್ದ, ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಮೂಲದ ದಿವ್ಯಾ (35), ಅವರ ಪುತ್ರ ಲಕ್ಷ್ಮೀಶ್‌ ಹಾಗೂ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳು ಶುಕ್ರವಾರ ಪತ್ತೆಯಾಗಿವೆ. ಇನ್ನೊಬ್ಬರು ಪತ್ತೆಯಾಗಿಲ್ಲ’ ಎಂದು ಕುಟುಂಬದವರು ತಿಳಿಸಿದ್ದಾರೆ.

ದಿವ್ಯಾ ವಯನಾಡ್‌ನ ಮಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

‘ತಾಯಿ ಹಾಗೂ ಮಗನ ಮೃತದೇಹ ಒಟ್ಟಿಗೇ ಪತ್ತೆಯಾಗಿದ್ದು, ಕರುಳು ಹಿಂಡುವಂತಿದೆ’ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ನೆಲ್ಯಹುದಿಕೇರಿಯ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಮಗಳು ದಿವ್ಯಾ ಕೇರಳದ ಚೂರಲ್‌ಮಲದ ಯುವಕನನ್ನು ವಿವಾಹವಾಗಿದ್ದರು.

****

ಒಂದು ತಿಂಗಳ ಪಡಿತರ ಉಚಿತ

ಮುಂಡಕ್ಕೈ ಮತ್ತು ಚೂರಲ್‌ಮಲ ಪ್ರದೇಶದ ಎಲ್ಲ ವರ್ಗಗಳ ಜನರಿಗೆ ಆಗಸ್ಟ್‌ ತಿಂಗಳಲ್ಲಿ ಉಚಿತ ಪಡಿತರ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್‌.ಅನಿಲ್‌ ಹೇಳಿದ್ದಾರೆ.

‘ಪಡಿತರವನ್ನು ಇದುವರೆಗೆ ಆದ್ಯತೆಯ ವರ್ಗದವರಿಗೆ ಉಚಿತವಾಗಿ ಮತ್ತು ಆದ್ಯತೆಯೇತರ ವರ್ಗದವರಿಗೆ ಕಡಿಮೆ ದರದಲ್ಲಿ ನೀಡಲಾಗುತ್ತಿತ್ತು. ಆದರೆ, ಆಗಸ್ಟ್‌ ತಿಂಗಳ ಪಡಿತರ ಎರಡೂ ವರ್ಗದವರಿಗೆ ಉಚಿತವಾಗಿ ನೀಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.