ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ 2,216 ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಏರ್ಪಡಿಸಲಾಗಿತ್ತು. ಆದರೆ ಸಂದರ್ಶನಕ್ಕೆ 25 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದು, ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾಗಿದೆ.
ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸಾವಿರಾರು ಜನ ನೂಕಾಟ–ತಳ್ಳಾಟ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂದರ್ಶನಕ್ಕೆ ಬಂದ ಭಾರಿ ಸಂಖ್ಯೆಯ ಜನರನ್ನು ನೋಡಿ ವಿಮಾನ ನಿಲ್ದಾಣದ ಸಿಬ್ಬಂದಿ ಹೌಹಾರಿದ್ದು, ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ.
ವರದಿ ಪ್ರಕಾರ, ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳು ಆಹಾರ, ನೀರಿಲ್ಲದೆ ಹಲವು ಗಂಟೆಗಳ ಕಾಲ ಕಾದು ಅಸ್ವಸ್ಥರಾದ ಘಟನೆ ನಡೆದಿದೆ.
ವಿಮಾನಗಳಿಗೆ ಸಾಮಾನುಗಳನ್ನು ತುಂಬಿಸುವುದು ಮತ್ತು ಇಳಿಸುವುದು, ಬ್ಯಾಗೇಜ್ ಬೆಲ್ಟ್ ಮತ್ತು ರಾಂಪ್ ಟ್ರ್ಯಾಕ್ಟರ್‌ಗಳನ್ನು ನಿರ್ವಹಿಸುವ ಕೆಲಸಗಳಿಗೆ ಉದ್ಯೋಗಿಗಳನ್ನು ನೇಮಿಸಲು ಸಂದರ್ಶನ ಏರ್ಪಡಿಸಲಾಗಿತ್ತು.
ಈ ಕೆಲಸಕ್ಕೆ ಮಾಸಿಕ ವೇತನ ₹20 ಸಾವಿರದಿಂದ ₹25 ಸಾವಿರ ಇರುತ್ತದೆ. ಕೆಲವೊಮ್ಮೆ ಅವಧಿಗಿಂತ ಹೆಚ್ಚು ಕೆಲಸ ಮಾಡಿದರೆ ₹30 ಸಾವಿರ ದೊರೆಯುತ್ತದೆ. ಶೈಕ್ಷಣಿಕವಾಗಿ ಹೆಚ್ಚು ಓದಿಲ್ಲದಿದ್ದರೂ ದೈಹಿಕವಾಗಿ ಸದೃಢರಾಗಿರಬೇಕು ಎನ್ನುವುದು ಈ ಉದ್ಯೋಗದ ಷರತ್ತುಗಳಾಗಿದ್ದವು ಎಂದು ಎನ್‌ಡಿಟಿ ವರದಿ ಮಾಡಿದೆ.
ಸಂದರ್ಶನಕ್ಕೆ ಬಂದ ಅಭ್ಯರ್ಥಿ ಪ್ರಥಮೇಶ್ವರ್ ಎನ್ನುವವರು ಮಾತನಾಡಿ, ‘ನಾನು ಬುಲ್ದಾನಾ ಜಿಲ್ಲೆಯವನು. ಸಂದರ್ಶನಕ್ಕಾಗಿ 400 ಕಿ. ಮೀ ಪ್ರಯಾಣಿಸಿ ಬಂದಿದ್ದೇನೆ. ಅವರು ₹22,500 ಸಂಬಳವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ನಾನು ಬಿಬಿಎ ಎರಡನೇ ವರ್ಷದ ವಿದ್ಯಾರ್ಥಿ. ಕೆಲಸಕ್ಕೆ ಬರುವುದಾದರೆ ಕಾಲೇಜು ಬಿಡಬೇಕು ಎಂದಿದ್ದರು. ಹೀಗಾದರೆ ನಾವೇನು ಮಾಡಬೇಕು? ನಿರುದ್ಯೋಗದ ಪ್ರಮಾಣ ಹೆಚ್ಚಳವಾಗಿದೆ. ಉದ್ಯೋಗವಕಾಶಗಳನ್ನು ಹೆಚ್ಚಿಸಬೇಕೆಂದು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.